ಪ್ರತಿ ರಾತ್ರಿ 80 ಕೋಟಿ ಜನರು ಹಸಿದುಕೊಂಡೇ ಮಲಗುತ್ತಾರೆ

Update: 2016-12-02 17:27 GMT

ರೋಮ್, ಡಿ. 2: ಜಗತ್ತಿನಾದ್ಯಂತ ಹಸಿವೆ ಮತ್ತು ಬೊಜ್ಜನ್ನೊಳಗೊಂಡ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಅಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಗುರುವಾರ ಹೇಳಿದೆ.

ಈ ಪ್ರವೃತ್ತಿಯನ್ನು ನಿಗ್ರಹಿಸಲು ಸರಕಾರಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2035ರ ವೇಳೆಗೆ ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಭಾಗ ಅಪೌಷ್ಟಿಕತೆಯ ಹೊಡೆತಕ್ಕೆ ಸಿಲುಕಬಹುದಾಗಿದೆ ಎಂದು ಅದು ಎಚ್ಚರಿಸಿದೆ.

ಪ್ರಸಕ್ತ ಈ ಸಮಸ್ಯೆಯು ಜಾಗತಿಕ ಜನಸಂಖ್ಯೆಯ ಮೂರನೆ ಒಂದು ಭಾಗಕ್ಕೆ ತಟ್ಟಿದೆ ಹಾಗೂ ಆರೋಗ್ಯ ಶುಶ್ರೂಶೆ ವೆಚ್ಚ ಮತ್ತು ಉತ್ಪಾದಕತೆ ನಷ್ಟ ರೂಪದಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿ ವರ್ಷ 3.5 ಲಕ್ಷ ಡಾಲರ್ ಹೊರೆಯನ್ನು ಉಂಟು ಮಾಡಿದೆ.

ಮಧ್ಯಮ ಆದಾಯದ ದೇಶಗಳಲ್ಲಿ ಎರಡೂ ರೂಪಗಳ ಅಪೌಷ್ಟಿಕತೆಗಳು ಹೆಚ್ಚುತ್ತಿವೆ ಹಾಗೂ ಮುಂಬರುವ ವರ್ಷಗಳಲ್ಲಿ ಅವುಗಳ ಆರ್ಥಿಕತೆಯ ಮೇಲೆ ತೀವ್ರ ಒತ್ತಡ ಹೇರಲಿವೆ.

ಸಮಸ್ಯೆಯನ್ನು ನಿಭಾಯಿಸುವ ವಿಧಾನಗಳನ್ನು ಕಂಡುಹಿಡಿಯಲು ಸರಕಾರಿ ಪ್ರತಿನಿಧಿಗಳು ರೋಮ್‌ನಲ್ಲಿ ಸಭೆ ಸೇರಿದ್ದಾರೆ ಎಂದು ಪರಿಣತರು ಹೇಳಿದರು.

ಪ್ರತಿ ರಾತ್ರಿ ಸುಮಾರು 80 ಕೋಟಿ ಜನರು ಹಸಿದುಕೊಂಡೇ ಮಲಗುತ್ತಾರೆ ಹಾಗೂ ಸುಮಾರು 190 ಕೋಟಿ ಜನರು ಅಧಿಕ ತೂಕ ಹೊಂದಿದ್ದಾರೆ ಎಂದು ಎಫ್‌ಎಒ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News