×
Ad

ದೇವರು, ಧರ್ಮದ ಹೆಸರಿನಲ್ಲಿ ವಂಚನೆಗೆ ಒಳಗಾಗಬೇಡಿ: ರಾಜಪ್ಪ ಮಾಸ್ತರ್

Update: 2016-12-02 22:54 IST

ಸೊರಬ, ಡಿ.2: ಅನಕ್ಷರಸ್ಥ ಮೂಢ ನಂಬಿಕ ಸ್ಥರಿಂದಲೂ ಅಕ್ಷರಸ್ಥ ಮೂಢನಂಬಿಕಸ್ಥರಿಂದ ಸಮಾಜ ಅವನತಿಯ ಹಾದಿ ಹಿಡಿದಿದೆ ಎಂದು ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಕಳವಳ ವ್ಯಕ್ತಪಡಿಸಿದರು


 . ಪಟ್ಟಣದಲ್ಲಿ ಗುರುವಾರ ಸಂಜೆ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಡಾಬಿಆರ್ ಅಂಬೇ ಡ್ಕರ್ ಮಹಾ ಪರಿನಿರ್ವಾಹಣ ದಿನದ ಅಂಗವಾಗಿ ಮೂಢ ನಂಬಿಕೆ ವಿರೋಧಿ ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಒಂದು ಕಾಲದಲ್ಲಿ ಅನಕ್ಷರತೆ, ಬಡತನ, ಅಜ್ಞಾನ ತಳ ಸಮುದಾಯದ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿ ಬದುಕನ್ನು ಕಸಿದುಕೊಂಡಿದ್ದವು. ಇಂದು ಸಾಕ್ಷರತೆಯ ಪ್ರಮಾಣ ಹೆಚ್ಚಾಗಿ ಬಡತನ, ಅಜ್ಞ್ಞಾನ ದೂರವಾಗಿದೆ. ಆದರೆ ಅಕ್ಷರಸ್ಥರು ಮಾತ್ರ ಮೂಲಭೂತವಾದಿಗಳ ಕೈಯಲ್ಲಿ ತಮ್ಮ ಬುದ್ಧಿ ಮತ್ತು ವಿವೇಚನೆಯನ್ನು ಬಿಟ್ಟು ಕೊಟ್ಟು ಮೌಢ್ಯೆಯ ಕೂಪದಲ್ಲಿ ನರಳಾಡುವ ಜೊತೆಗೆ ಸಮಾಜವನ್ನು ಬಲಿ ಕೊಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.


ಶ್ರಮಿಕ ವರ್ಗ ಎಲ್ಲಿಯವರೆಗೆ ತಾವು ದುಡಿದ ಹಣವನ್ನು ತಮ್ಮ ಕುಟುಂಬದ ಬೆಳವಣಿಗೆಗೆ ಬಳಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ತಳ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಅವರು, ಭಾವನಾತ್ಮಕವಾಗಿ ದೇವರು, ಧರ್ಮದ ಹೆಸರಿನಲ್ಲಿ ವಂಚನೆಗೆ ಒಳಗಾಗದೆ ವೈಚಾರಿಕ ದೃಷ್ಟಿಕೋನದಲ್ಲಿ ಬದುಕು ಕಟ್ಟಿಕೊಳ್ಳುವ ಕಡೆಗೆ ಚಿಂತಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಉದ್ಧಾರಕ್ಕಾಗಿ ಶ್ರಮಿಸಿದ ದಾರ್ಶನಿಕರ ವಿಚಾರಧಾರೆಗಳನ್ನು ರಾಜ್ಯದಾದ್ಯಂತ ತಲುಪಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.


ಸಾಮಾಜಿಕ ಹೋರಾಟಗಾರ ಕೆ.ಮಂಜುನಾಥ್ ಮಾತನಾಡಿ, ಪ್ರಗತಿಪರ ಸಮಾಜ ಕಟ್ಟಲು ಬುದ್ಧ,ಬಸವ, ಅಂಬೇಡ್ಕರ್ ನಿರಂತರ ಹೋರಾಟ ಮಾಡಿದ್ದಾರೆ. ಯುವ ಜನಾಂಗ ಶಿಕ್ಷಣ ಪಡೆಯುವ ಮೂಲಕ ವೈಜ್ಞ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಡಿ.6ಂದು ಬೆಳಗಾವಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್  ಮಹಾ ಪರಿನಿರ್ವಾಹಣ ದಿನದ ಅಂಗವಾಗಿ ನಡೆಯುವ ಮೌಢ್ಯ ವಿರೋಧಿ ಕಾರ್ಯಕ್ರಮಕ್ಕೆ ಮಾನವ ಬಂಧುತ್ವ ವೇದಿಕೆ ವತಿಯಿಂದ ಬ್ರಹ್ಮ ನಾರಾಯಣ ಗುರು ಕಲಾ ತಂಡದವರು ಸೊರಬದಲ್ಲಿ ಜಾಥಾ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.


ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ರತಮ್ಮ, ನಾಗಪ್ಪ ಮಾಸ್ತರ್, ರವಿಕುಮಾರ್, ಮಂಜಪ್ಪ ಹುಕ್ತಿಕೊಪ್ಪ, ಬಾನಪ್ಪ, ರಂಗಮ್ಮ, ಕೃಷ್ಣಮೂರ್ತಿ, ರಂಗನಾಥ್, ಪ್ರಶಾಂತ್, ಶೇಖರ್ ನಾಯಕ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News