ಮಾನಸಿಕ ಒತ್ತಡದಿಂದಲೇ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ: ಸಿಬಿಐ ವರದಿ

Update: 2016-12-03 13:14 GMT

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.3: ರಾಜ್ಯದಲ್ಲಿ ಕಳೆದ ವರ್ಷ ನಡೆದಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಸಿಬಿಐ ವರದಿ ತಿಳಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರಕಟಿಸಿದ್ದಾರೆ.

ಶನಿವಾರ ಉಭಯ ಸದನಗಳಲ್ಲಿ ಸಿಬಿಐ ಸಲ್ಲಿರುವ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಿದ ಸಚಿವರು, ವೈದ್ಯಕೀಯ ತಜ್ಞರ ಅಭಿಪ್ರಾಯ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತನಿಖೆ ವೇಳೆಯ ಎಲ್ಲಾ ಸಾಕ್ಷಾಧಾರಗಳ ಹೇಳಿಕೆಯನ್ವಯ ಡಿ.ಕೆ.ರವಿ ಮಾನಸಿಕ ಒತ್ತಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

2015ರ ಮಾರ್ಚ್ 16ರಂದು 2009ರ ಬ್ಯಾಚ್‌ನ ಐಎಎಸ್ ಅಧಿಕಾರಿ ಡಿ.ಕೆ.ರವಿ, ಬೆಂಗಳೂರಿನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುತ್ತಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೃತರ ಮಾನ ಹನುಮಂತರಾಯಪ್ಪ ಅವರ ದೂರಿನ್ವಯ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸಂಶಯದ ಹಿನ್ನೆಲೆಯಲ್ಲಿ ಪಕರಣದ ತನಿಖೆಯನ್ನು 2015ರ ಎಪ್ರಿಲ್ 6ರಂದು ಸಿಬಿಐಗೆ ವಹಿಸಲಾಗಿತ್ತು.

 ಇದೀಗ ಮೇಲ್ಕಂಡ ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿದ ಸಿಬಿಐ 2016ರ ನವೆಂಬರ್ 24ರಂದು ರಾಜ್ಯ ಸರಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಡಿ.ಕೆ. ರವಿ ಅವರು ಮಾನಸಿಕ ಒತ್ತಡದಿಂದಲೇ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ದೃಢಪಡಿಸಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News