×
Ad

ಅಕ್ಷರಜಾತ್ರೆಗೆ ಹರಿದು ಬಂದ ಜನಸಾಗರ : ಕುಡಿಯುವ ನೀರು, ಶೌಚಾಲಯಕ್ಕಾಗಿ ಪರದಾಟ

Update: 2016-12-03 22:08 IST

ರಾಯಚೂರು, ಡಿ. 2 : ಎಡದೊರೆ ನಾಡು ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂತು.

ಬೆಳಿಗ್ಗೆ 8 ಗಂಟೆಯಿಂದಲೇ ಸ್ಥಳೀಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನ ಕಣ್ಮನ ತುಂಬಿಕೊಳ್ಳಲು ತಂಡೋಪ ತಂಡವಾಗಿ ಆಗಮಿಸಿದರು.

ರಾಜ್ಯದ ನಾನಾಜಿಲ್ಲೆಗಳಿಂದ ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರುಗುರುವಾರವೇ ನಗರಕ್ಕೆ ಆಗಮಿಸಿದರು. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಜಿಲ್ಲಾಡಳಿತ ಮಾಡಿದ್ದು, ಸಮ್ಮೇಳನದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೆರವಣಿಗೆಯಲ್ಲಿ ಹಾಗೂ ಮುಖ್ಯವೇದಿಕೆಯಲ್ಲಿ ಜನಸಾಗರಜಮಾಯಿಸಿದ್ದ ಕಾರಣ ಯಾವುದೇ ವಾಹನಗಳನ್ನು ಲಿಂಗಸೂಗೂರು ರಸ್ತೆ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೋಲಿಸ್ ಇಲಾಖೆ ಭಾರೀ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಒಟ್ಟು 1800 ಪೊಲೀಸ್ ಸಿಬ್ಬಂದಿಯನ್ನು ಸಾಹಿತ್ಯ ಸಮ್ಮೇಳನಕ್ಕೆ ನಿಯೋಜಿಸಲಾಗಿದೆ.

ಜಿಲ್ಲೆಯ ಪ್ರತಿ ತಾಲೂಕಿಗೆ ತಲಾ 3 ಬಸ್ ಸೌಕರ್ಯವನ್ನು ಉಚಿತವಾಗಿ ಮಾಡಿರುವುದರಿಂದ ತಾಲೂಕುಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದರು.

ರಾಯಚೂರು ನಗರದಲ್ಲಿ 10 ನಗರ ಸಾರಿಗೆ ಬಸ್ ಉಚಿತವಾಗಿ ಬಿಟ್ಟಿರುವುದರಿಂದ ನಗರದ ಜನತೆಯೂ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿನಗರ ಸೇರಿದಂತೆ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುವುದು ಕಂಡು ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರು ವೇದಿಕೆ ಆಗಮಿಸುತ್ತಿದ್ದಂತೆ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಸಮ್ಮೇಳನದಲ್ಲಿ ಕುಡಿಯುವ ನೀರು, ಶೌಚಾಲಯಕ್ಕಾಗಿ ಪರದಾಟ

ಕೃಷ್ಣ-ತುಂಗೆಯ ಭತ್ತದ ನಾಡು ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯಕ್ಕಾಗಿ ಪರದಾಟ ಮಾಡಬೇಕಾಯಿತು.

ನಗರದ ಕೃಷಿ ವಿಶ್ವಿವಿದ್ಯಾಲಯ ಅವರಣದಲ್ಲಿ ಆಯೋಜಿಸಿರುವ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆ, ಊಟದ ವ್ಯವಸ್ಥೆ, ಪುಸ್ತಕ ಮಳಿಗೆ ಹಾಗೂ ಮಾಧ್ಯಮ ಕೇಂದ್ರ ಹತ್ತಿರ ಎಲ್ಲಿಯೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಾಣ ಸಿಗಲಿಲ್ಲ. ಪುಸ್ತಕ ಮಳಿಗೆಗಳ ಹತ್ತಿರ ಸುಮಾರು ನೂರಕ್ಕೂ ಶೌಚಾಲಯಗಳನ್ನು ನಿರ್ಮಿಸಿಲಾಗಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

ಅಕ್ಷರ ಜಾತ್ರೆಯಲ್ಲಿ ಸಾರ್ವಜನಿಕರಿಗೆ ಊಟ ವ್ಯವಸ್ಥೆಯ ಮಾಡಿದ ಸ್ಥಳದಲ್ಲಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಕಾಣುತ್ತಿತ್ತು. ಆದರೆ ಮುಖ್ಯವೇದಿಕೆ ಸೇರಿದಂತೆ ಎಲ್ಲಿಯೂ ಸಾರ್ವಜನಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ನಾಗರೀಕರು ದೂರಿದ್ದಾರೆ.

ಇನ್ನೂ ಮಾಧ್ಯಮ ಕೇಂದ್ರದ ಅಕ್ಕ ಪಕ್ಕದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಿಲ್ಲ. ಅಕ್ಷರ ಜಾತ್ರೆಗೆಸುಮಾರು ಒಂದು ಲಕ್ಷ ಜನ ಸೇರಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಊಟದ ಸ್ಥಳ ಬಿಟ್ಟು ಎಲ್ಲಿಯೂ ವ್ಯವಸ್ಥೆ ಎಲ್ಲಿಯೂ ಮಾಡಿಲ್ಲ. ಇದರಿಂದ ಸಾರ್ವಜನಿಕರು ಹಣ ನೀಡಿ ಕುಡಿಯುವ ನೀರು ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಧ್ಯಮ ಪ್ರತಿನಿಧಿಗಳಿಗೂ ಊಟದ ಅಸ್ತವ್ಯಸ್ತ ಉಂಟಾಯಿತು. ಪತ್ರಕರ್ತರು ಸಹ ಊಟಕ್ಕಾಗಿ ಅಲೆದಾಡ ಮಾಡುವ ಸ್ಥಿತಿ ಉಂಟಾಗತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News