ಕಪ್ಪು ಹಣವನ್ನು ಬಿಳಿ ಮಾಡಲು ಯತ್ನ
ಸುಂಟಿಕೊಪ್ಪ,ಡಿ.3: ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ನಿರತರಾಗಿದ್ದ ನಾಲ್ವರು ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಬಂಧಿಸಲಾಗಿದೆ. ಅಲ್ಲದೆ 35 ಲಕ್ಷದ 46ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಬಂದ ಮಾಹಿತಿಯನ್ವಯ ಸುಂಟಿಕೊಪ್ಪ ಠಾಣಾಧಿಕಾರಿಯವರಿಗೆ ಆದೇಶ ನೀಡಿದ ಮಾಹಿತಿಯನ್ನು ಆಧರಿಸಿ ಇಲ್ಲಿಗೆ ಸಮೀಪದ ಕೂರ್ಗ್ ಕೌಂಟಿ ರೆಸಾರ್ಟ್‌ನಲ್ಲಿ ತಂಗಿದ್ದ ಕಪ್ಪುಹಣವನ್ನು ಬಿಳಿ ಮಾಡಿ ಚಲಾವಣೆಗೆ ತರಲು ಸಂಬಂಧಿಸಿದ ಗಿರಾಕಿಗಳಿಗಾಗಿ ಕಾಯುತ್ತಿದ್ದ ಶನಿವಾರಸಂತೆ ತಾಲೂಕು ಪಂಚಾಯತ್ ಸದಸ್ಯ ಬಿಎಸ್. ಅನಂತ್ ಕುಮಾರ್, ಕುಶಾಲನಗರದ ಹ್ಯಾಮರ್ಸನ್ ಅಂತೋಣಿ, ಜಮೀಲ್ ಅಹ್ಮದ್, ಕೊಪ್ಪದ ಶ್ರೀಧರ್ ಎಂಬವರು ತಾ.2 ರ ಮಧ್ಯರಾತ್ರಿ 35 ಲಕ್ಷದ 46 ಸಾವಿರ ನಗದು ಅದರಲ್ಲಿ 2,000 ರೂ. ಮುಖಬೆಲೆಯ 34 ಲಕ್ಷ 40 ಸಾವಿರ ರೂ., 100 ಮುಖಬೆಲೆಯ 96,000 ರೂ., 50 ಮುಖಬೆಲೆಯ 10,000 ರೂ. ನೋಟುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂಪತ್ ಕುಮಾರ್, ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪ ಅರಕ್ಷಕ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ರೆಸಾರ್ಟ್‌ಗೆ ದಾಳಿ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದ ಈ ಕಪ್ಪು ಹಣವನ್ನು ಬಿಳಿ ಮಾಡುವ ಪ್ರಯತ್ನದಲ್ಲಿದ್ದ ಆರೋಪಿಗಳನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಯಾದ ದಯಾನಂದ, ಪುಂಡರಿಕಾಕ್ಷ, ಮುಸ್ತಫಾ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.