ಎಂಜಿ ರಸ್ತೆಯಲ್ಲಿ ಸಂತೆ ಮಾರುಕಟ್ಟೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ
ಕಾರವಾರ, ಡಿ.3: ಸಾರ್ವಜನಿಕರ ಹಾಗೂ ವ್ಯಾಪಾ ರಸ್ಥರ ಹಿತದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಮಾತ್ರ ಶಿಸ್ತು ಬದ್ಧವಾಗಿ ಪೊಲೀಸ್ ಇಲಾಖೆಯ ಸಹಕಾರದಿಂದ ವಾರದ ಸಂತೆ ಮಾರುಕ್ಟೆಯನ್ನು ನಡೆಸಲು ಅವಕಾಶ ನೀಡಬೇಕು ಎಂದು ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಲವಾರು ವರ್ಷಗಳಿಂದ ನಗರದ ಎಂಜಿ. ರಸ್ತೆ, ಪಿಕಳೆ ರಸ್ತೆ, ಕಮಲಾಕರ ರಸ್ತೆ, ಲೈಬ್ರರಿ ರಸ್ತೆಗಳಲ್ಲಿ ವಾರದ ಸಂತೆಯನ್ನು ನಡೆಸಲಾಗುತ್ತಿತ್ತು. ಕೆಲವು ವರ್ಷಗಳಿಂದ ಸಂತೆಯು ಬೆಳೆಯುತ್ತಾ ಸಾಗಿದೆ. ಸೀಬರ್ಡ್, ಕೈಗಾ ಪ್ರದೇಶ ಗಳಿಂದಲೂ ಹೆಚ್ಚಿನ ಜನರು ಆಗಮಿಸುತ್ತಿದ್ದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ಹಿಂದಿನ ಜಿಲ್ಲಾಧಿಕಾರಿಗಳು ಸಂತೆ ಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕರಿಗೆ ಅನುಕೂಲವಾಗಲು ಎಪಿಎಂಸಿ ಪ್ರಾಂಗಣದಲ್ಲಿ ನಡೆಸಲು ಸೂಚಿಸಿದ್ದರು. ಆದರೆ ಪ್ರಾಂಗಣದಲ್ಲಿ ರಸ್ತೆ, ಚರಂಡಿ, ನೀರು ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿ ಸುವುದು ಕಷ್ಟವಾಗುತ್ತದೆ ಎಂದು ಕೃಷಿ ಉತ್ಪನ್ನ ಮಾರು ಕಟ್ಟೆಯ ಕಾರ್ಯದರ್ಶಿಗಳು ತಿಳಿಸಿದ್ದರಿಂದ ನಗರದ ರಸ್ತೆಗಳ ಫುಟ್‌ಪಾತ್ ಮೇಲೆಯೇ ನಡೆಸಲಾಗುತ್ತಿದೆ. ಹಿಂದಿನ ವಾರದ ಸಂತೆಯನ್ನು ಕೆಇ.ಬಿ. ಎದುರು ಇರುವ ಬಯಲು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು.
ಆದರೆ ಸ್ಥಳಾವಕಾಶ ಕಡಿಮೆ ಇದ್ದುದರಿಂದ ವ್ಯಾಪಾರಸ್ಥರು ಪುನಃ ರಸ್ತೆಯಲ್ಲಿ ಕುಳಿತು ವ್ಯಾಪಾರ ಪ್ರಾರಂಭ ಮಾಡಿದ್ದರಿಂದ ಸಾರ್ವಜನಿಕರು ಕಷ್ಟಪಡುವಂತಾಯಿತು.
ನಗರಸಭೆಯ ಪೌರಾಯುಕ್ತರಿಗೆ ಸಂತೆಯನ್ನು ಕಡಲತೀರದಲ್ಲಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದು, ಈ ಕುರಿತು ಸರ್ವಸದಸ್ಯರ ಸಭೆಯನ್ನು ನಡೆಸಲಾಗಿದೆ.
ಸಭೆಯ ನಿರ್ಣಯದ ಪ್ರಕಾರ ಕಡಲ ತೀರದಲ್ಲಿ ಸಂತೆ ನಡೆಸಲು ಜಿಲ್ಲಾಡಳಿತ ನೀಡಿರುವ ನಕ್ಷೆಯಲ್ಲಿ ಕೇವಲ 500 ವ್ಯಾಪಾರಸ್ಥರಿಗೆ ಮಾತ್ರ ಅವಕಾಶವಿದೆ. ಆದರೆ ಹೂವು, ಹಣ್ಣು, ತರಕಾರಿ ಹಾಗೂ ಒಣ ಮೀನು ವ್ಯಾಪಾರಸ್ಥರೂ ಸೇರಿ ಸಾವಿರಕ್ಕೂ ಹೆಚ್ಚು ಜನರು ಆಗಮಿಸುವುದರಿಂದ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಅಲ್ಲದೆ ಕಡಲ ತೀರದಲ್ಲಿ ಬಿಸಿಲಿನ ತಾಪದಿಂದ ರೈತರು ತಂದ ವಸ್ತುಗಳು ಬೇಗ ಹಾಳಾಗುವ ಸಂಭವ ಇದೆ. ಆದ್ದರಿಂದ ವಾರದ ಸಂತೆಯನ್ನು ಈ ಹಿಂದಿನಂತೆ ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್ ಗಳಲ್ಲಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಪರವಾಗಿ ನಗರಸಭೆಯ ಸದಸ್ಯರು ಮನವಿ ಮಾಡಿದರು.
ುನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು ನಗರದ ಅಭಿವೃದ್ಧಿ ದೃಷ್ಟಿಯಿಂದ ಎಂಜಿ ರಸ್ತೆಯಲ್ಲಿ ಪುನಃ ಸಂತೆ ಮಾರುಕಟ್ಟೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ. ಸದ್ಯ ಪ್ರಾಯೋಗಿಕವಾಗಿ ಬಿಲ್ಟ್ ಸರ್ಕಲ್ ಪಕ್ಕದ ಕಡಲ ತೀರ ಪ್ರದೇಶದಲ್ಲಿ ಸಂತೆ ಮಾರುಕಟ್ಟೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನದಲ್ಲಿ ಎಲ್ಲ ವ್ಯವಸ್ಥೆಗಳನ್ನು ಅವಲೋಕಿಸಿ ಸೂಕ್ತ ಸ್ಥಳ ಗುರುತಿಸಲಾಗುವುದು ಎಂದರು
ಮನವಿ ಸಲ್ಲಿಸುವ ನಿಯೋಗದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ಮಹೇಶ ತಾಮಸೆ, ಅನಿಲ್ ನಾಯ್ಕ, ರತ್ನಾಕರ್ ನಾಯ್ಕ, ರಂಜು ಮಾಸೇಲಕರ್, ಪ್ರೇಮಾನಂದ ಗುನಗಾ, ರಮೇಶ ಗೌಡ, ಪಾಂಡುರಂಗ ರೇವಂಡಿಕರ್, ರವೀಂದ್ರ ಬಾನಾವಳಿ ಹಾಗೂ ಇನ್ನಿತರರು ಇದ್ದರು.