×
Ad

ರಕ್ಷಣೆಯಲ್ಲಿ ನೌಕಾದಳದ ಪಾತ್ರ ಅನನ್ಯ: ಅಡ್ಮಿರಲ್

Update: 2016-12-03 22:44 IST

ಕಾರವಾರ, ಡಿ.3: ದೇಶದ ರಕ್ಷಣೆಯೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭಾರತೀಯ ನೌಕಾದಳವು ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕಾರವಾರದಲ್ಲಿ 2017 ರಿಂದ ಫೆಸ್ 2 ಯೋಜನೆ ಕಾಮಗಾರಿ ಆರಂಭವಾಗಲಿದೆ ಎಂದು ಅಡ್ಮಿರಲ್ ಕೆ.ಜೆ. ಕುಮಾರ ಹೇಳಿದರು.


ನೌಕಾ ಸಪ್ತಾಹದ ಅಂಗವಾಗಿ ಐಎನ್‌ಎಸ್ ಆದಿತ್ಯ ನೌಕೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021 ಅವಧಿಯಲ್ಲಿ ಎರಡನೆ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಏಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.


19,600 ಕೋಟಿ ರೂ. ವೆಚ್ಚದಲ್ಲಿ ಎರಡನೆ ಹಂತದ ಕಾಮಗಾರಿ ನಡೆಯಲಿದ್ದು, ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಕದಂಬ ನೌಕಾಲೆನೆ ಕಲ್ಪಿಸಲಿದೆ ಎಂದರು. ಇದು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುವುದರೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ದೇಶದ ರಕ್ಷಣೆಗೆ ಭಾರತೀಯ ನೌಕಾದಳ ಸದಾ ಸಿದ್ಧವಿದೆ. ಭಾರತೀಯ ನೌಕಾದಳವನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ ಎಂದರು.


ಪೂರ್ವ ನೌಕಾನೆಲೆ ದೊಡ್ಡದಾಗಿದ್ದು, ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಕರ್ನಾಟಕದ ನೌಕಾ ನೆಲೆ ಕಾರವಾರದಲ್ಲಿದ್ದು, ಇದು ಪೂರ್ವ ನೌಕಾನೆಲೆ ಭಾಗವಾಗಿದೆ. ಕರ್ನಾಟಕ ಕರಾವಳಿ ಸುರಕ್ಷಿತವಾಗಿರುವಂತಾಗಿದೆ ಎಂದು ಹೇಳಿದರು.


 ಅಲ್ಲದೆ, ಸ್ಥಳೀಯ ಜನರು ವಿಶೇಷವಾಗಿ ಮೀನುಗಾರರು ನಮ್ಮ ಕಣ್ಣು ಮತ್ತು ಕಿವಿಗಳಿದ್ದಂತೆ. ಕರ್ನಾಟಕ ಕರಾವಳಿ ರಕ್ಷಣೆಯಲ್ಲಿ ಅವರ ಸಹಕಾರವು ಸಾಕಷ್ಟಿದೆ ಎಂದರು. ಕಾರವಾರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಆರೋಗ್ಯ ಶಿಬಿರ, ಕ್ರೀಡಾಕೂಟ ಸ್ಪರ್ಧೆ, ಈಜು ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ರಸ ಪ್ರಶ್ನೆ ಆಯೋಜಿಸಲಾಗುತ್ತದೆ. ಶಾಲಾ ಮಕ್ಕಳಿಗೆ ಹಡಗು ವೀಕ್ಷಣೆಗೆ ಅವಕಾಶವನ್ನು ನೇವಿ ಮೇಳದಲ್ಲಿ ಕಲ್ಪಿಸಲಾಗಿದೆ ಎಂದರು.


 ಸಾಮಾಜಿಕ ಬೆಳವಣಿಗೆಗೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಟ್ಟು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಗುಡ್ಡೆಹಳ್ಳಿಯನ್ನು ದತ್ತು ಗ್ರಾಮವನ್ನಾಗಿ ತೆಗೆದುಕೊಳ್ಳಲಾಗಿದೆ. ಈ ದತ್ತು ಗ್ರಾಮಕ್ಕೆ ಶಾಲಾ ಕಟ್ಟಡ ರಿಪೇರಿ, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು, ನೋಟ್‌ಪುಸ್ತಕಗಳನ್ನು, ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ ಎಂದು ವಿವರಿಸಿದರು.


ಈ ಸಂದರ್ಭದಲ್ಲಿ ಕಾರವಾರ ನೌಕಾದಳ ಸಿಬ್ಬಂದಿ ಮತ್ತು ಪ್ರಭಾರಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಮ್. ಹೆಬ್ಬಾರ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News