×
Ad

ಕನ್ನಡ ಉಳಿವಿಗೆ ತಂತ್ರಾಂಶದ ಸಮರ್ಥ ಬಳಕೆ ಅಗತ್ಯ: ವಿಜಯಶಂಕರ್

Update: 2016-12-03 23:57 IST

ರಾಯಚೂರು,ಡಿ.3: ತಂತ್ರಾಂಶವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸಾಕಷ್ಟು ಅನುಭವ ಹೊಂದಿರುವ ನಮ್ಮ ಹೊಸ ತಲೆಮಾರು ಕನ್ನಡ ಭಾಷೆಯ ಉಳಿವಿನ ದೃಷ್ಟಿಯಿಂದ ತಂತ್ರಾಂಶವನ್ನು ಜ್ಞಾನವಾಹಿನಿಯಾಗಿ ಬಳಸಿಕೊಳ್ಳಬೇಕಾಗಿರುವುದು ಅತೀ ಆವಶ್ಯವಿದೆ ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.

ಡಿ.3ರಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ನಡೆದ ಕನ್ನಡ ಮತ್ತು ಹೊಸ ತಲೆಮಾರು ಎನ್ನುವ ಗೋಷ್ಠಿಯಲ್ಲಿ ಕನ್ನಡ ತಂತ್ರಾಂಶ ಬಳಕೆಯ ಸವಾಲುಗಳ ಕುರಿತು ಅವರು ಮಾತನಾಡಿದರು.
ಇವತ್ತಿನ ನಮ್ಮ ಜ್ಞಾನವು ತಂತ್ರಜ್ಞಾನವನ್ನು ಪ್ರವೇಶಿಸುವಾಗ ಅಲ್ಲಿ ಜ್ಞಾನದ ಲಾಭವು ಪ್ರವೇಶವಾಗುತ್ತಿಲ್ಲ. ಜ್ಞಾನ ಒಂದೆಡೆ ಮತ್ತು ತಂತ್ರಾಂಶ ಒಂದೆಡೆ ಎನ್ನುವಂತಹ ಸಂಕೀರ್ಣ ಸ್ಥಿತಿ ಎದುರಾಗಿದೆ. ಕನ್ನಡವನ್ನು ತಂತ್ರಾಂಶಕ್ಕೆ ಅಳವಡಿಸುವ ಕೆಲಸ ಶಿಸ್ತು ಬದ್ಧ ರೀತಿಯಲ್ಲಿ ನಡೆಯಬೇಕಿದೆ. ಇದಕ್ಕೆ ಒಂದು ಸಮಿತಿ ರಚನೆಯ ಅಗತ್ಯವಿದೆ. ಈ ಕೆಲಸವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಬಾರದು. ಇದು ಎಲ್ಲರ ಅಗತ್ಯ ಜವಾಬ್ದಾರಿ ಎಂದರು.

ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು ಕುರಿತು ಬೇಳೂರು ಸುದರ್ಶನ ಮಾತನಾಡಿ, ಮುಕ್ತ ಜ್ಞಾನ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದ್ದರಿಂದ ಉನ್ನತ ತಂತ್ರಜ್ಞಾನವು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗಬೇಕಿದೆ. ಅನುವಾದ ತಂತ್ರಜ್ಞಾನವನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು. ಅನ್ನದ ಭಾಷೆಯಾಗಿ ಕನ್ನಡ ಕುರಿತು ಅರುಣ ಕುಮಾರ ಬನ್ನೂರ ಮಾತನಾಡಿ, ಕನ್ನಡವನ್ನು ನಾವು ಕೇವಲ ಭಾಷೆ ಎಂದೇ ಪರಿಗಣಿಸಿದೆವು, ಆದರೆ ಅದೊಂದು ಕೌಶಲ ಎಂದು ಪರಿಭಾವಿಸಿ ಕೊಳ್ಳಲಿಲ್ಲ. ನಮ್ಮ ದಿನನಿತ್ಯದ ಸವಾಲುಗಳಿಗೆ ಪರಿಹಾರವಾಗಿ ಕನ್ನಡವು ಮಾರ್ಪಾಡಗಬೇಕಿರುವುದು ಅತಿ ಅವಶ್ಯವಿದೆ ಎಂದು ತಿಳಿಸಿದರು.
 ಅಧ್ಯಕ್ಷತೆ ವಹಿಸಿದ್ದ ಡಾ.ಶ್ರೀಕಂಠ ಕೂಡಿಗೆ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯು ನಮ್ಮಲ್ಲಿ ಕೌಶಲ ವೃದ್ಧಿಸುವಂತಿರಬೇಕು. ಅಂದರೆ ಮಾತ್ರ ಅನ್ನದ ಭಾಷೆಯಾಗಿ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಎಂದರು.

ವಿಷಯದ ಕುರಿತು ಪ್ರತಿಕ್ರಿಯಿಸಿದ ಡಾ.ವಿ.ಎಸ್.ಮಾಳಿ, ಕನ್ನಡವನ್ನು ಹಲವು ಸಾಧ್ಯತೆಗಳಿಗೆ ಕೊಂಡೊಯ್ಯುವ ದಿಶೆಯಲ್ಲಿ ತಂತ್ರಾಂಶ ಬಳಕೆಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು. ಕೈವಾರ್ ಎನ್ ಶ್ರೀನಿವಾಸ ಸ್ವಾಗತಿಸಿದರು. ನಾಗಾನಂದ ಕೆಂಪರಾಜ್ ನಿರೂಪಿಸಿದರು. ಚಿ.ಮಾ.ಸುಧಾಕರ ವಂದಿಸಿದರು. ಶ್ರೀನಿವಾಸ ಕರ್ಲಿ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News