×
Ad

ತೀವ್ರ ವಿವಾದಕ್ಕೆ ಕಾರಣವಾದ ಫ್ಲೆಕ್ಸ್

Update: 2016-12-04 00:06 IST

ರಾಯಚೂರು, ಡಿ. 3: ಇಲ್ಲಿ ನಡೆಯುತ್ತಿರುವ 82ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸದು ದ್ದೇಶವನ್ನೇ ಅಣಕಿಸುವಂತೆ ಸಮ್ಮೇಳನದ ಪ್ರಧಾನ ವೇದಿಕೆಯ ಹಿಂಭಾಗದಲ್ಲಿ ಹಾಕಿದ್ದ ಬೃಹತ್ ಫ್ಲೆಕ್ಸ್ ಒಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸರ್ವಜ್ಞನ ಹೆಸರಿನಲ್ಲಿ ಉಲ್ಲೇಖಕೊಂಡಿರುವ ವಚನವೊಂದನ್ನು ಈ ಫ್ಲೆಕ್ಸ್‌ನಲ್ಲಿ ತಿರುಚಿ ಬರೆಯಲಾಗಿದೆ. ಪರೋಕ್ಷವಾಗಿ, ಸರಕಾರದ ಬಡವರ ಪರ ಯೋಜನೆಗಳನ್ನು ಈ ವಚನದಲ್ಲಿ ಅಣಕಿಸಲಾಗಿದೆ. ಜೊತೆಗೆ ಸರ್ವಜ್ಞನ ವಚನವನ್ನೂ ಅವಮಾನಿಸಲಾಗಿದೆ.

‘‘ವಾಸಕ್ಕೆ ಆಶ್ರಯ ಮನೆ ಇರಲು
ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತಿರಲು
ರಾತ್ರಿ ನಶೆಗೆ ಅಗ್ಗದ ಮದ್ಯವಿರಲು
ಕೂಲಿಕೆಲಸಕ್ಕೆ ಬೆಂಕಿ ಹಚ್ಚೆಂದ ಸರ್ವಜ್ಞ’’
-ಸರ್ವಜ್ಞ


ಹೀಗೆ ಸರ್ವಜ್ಞನ ವಚನವನ್ನು ವಿರೂಪಗೊಳಿಸಿ ಬೃಹತ್ ಫ್ಲೆಕ್ಸ್‌ನಲ್ಲಿ ಅಣಕಿಸಲಾಗಿದೆ. ಶನಿವಾರದ ಬೆಳಗ್ಗೆ 8.30ರವರೆಗೂ ಇದ್ದ ಫ್ಲೆಕ್ಸನ್ನು, ಸಾರ್ವ ಜನಿಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸು ತ್ತಿದ್ದಂತೆಯೇ, ತೆರವುಗೊಳಿಸಲಾಗಿದೆ. ಈ ಫ್ಲೆಕ್ಸ್ ಸಾಮಾಜಿಕ ತಾಣಗಳಲ್ಲೂ ತೀವ್ರ ಚರ್ಚೆಗೆ ಕಾರಣ ವಾಗಿದೆ. ಕನ್ನಡ ಭಾಷೆ, ಸಾಹಿತ್ಯಕ್ಕೆ ಮಾಡಿದ ಅವಮಾನ ಇದಾಗಿದೆ ಎಂದು ಸಾಹಿತ್ಯಾಭಿಮಾನಿ ಗಳು ಕೆಂಡ ಕಾರಿದ್ದಾರೆ.
 ಕಿಡಿಗೇಡಿಗಳು ಈ ಫ್ಲೆಕ್ಸನ್ನು ಹಾಕಿರಬಹುದು. ಆದರೆ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಡಳಿತದ ಅನುಮತಿ ಇಲ್ಲದೆ ಹೇಗೆ ಇದನ್ನು ಹಾಕಲಾ ಯಿತು? ಇದರ ಕುರಿತಂತೆ ಕಸಾಪ ಮುಖಂಡರು ಯಾಕೆ ಕುರುಡರಂತೆ ವರ್ತಿಸಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಫ್ಲೆಕ್ಸ್ ಕುರಿತು ಪ್ರತಿಕ್ರಿಯಿ ಸಿರುವ ಕಸಾಪ ಅಧ್ಯಕ್ಷ ಮನು ಬಳಿಗಾರ್, ‘‘ವಿವಾದಕ್ಕೆ ಕಾರಣವಾದ ಫ್ಲೆಕ್ಸ್ಸನ್ನು ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ಈ ಬಗ್ಗೆ ರಾಯ ಚೂರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಜೊತೆಗೆ ಮಾತನಾಡಿದ್ದೇನೆ. ಫ್ಲೆಕ್ಸ್ ಹಾಕಿದವರು ಯಾರು ಎನ್ನುವುದನ್ನು ತನಿಖೆ ಮಾಡಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದೇನೆ’’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News