ಕನ್ನಡತನಕ್ಕೆ ಕೈದೀವಿಗೆಯಾಗುವ ಬರಗೂರು ಮಾತುಗಳು

Update: 2016-12-04 18:32 GMT

ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಈ ಬಾರಿ ಹಲವು ಕಾರಣಗಳಿಗಾಗಿ ಕುತೂಹಲವನ್ನು ಕೆರಳಿಸಿತ್ತು. ಒಂದು, ಉತ್ತರ ಕರ್ನಾಟಕದಲ್ಲಿ ನಡೆದ ಸಮ್ಮೇಳನ ಇದಾಗಿರುವುದರಿಂದ, ಪ್ರತ್ಯೇಕತೆಯ ಧ್ವನಿ ಸಮ್ಮೇಳನವನ್ನು ಮಂಕಾಗಿಸಬಹುದೋ ಎಂಬ ಆತಂಕ ಕೆಲವರನ್ನು ಕಾಡಿತ್ತು. ಅಷ್ಟೆ ಅಲ್ಲ, ನೋಟು ನಿಷೇಧವೂ ಸಾಹಿತ್ಯ ಸಮ್ಮೇಳನದ ಮೇಲೆ ಮೋಡ ಕವಿದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಆರ್ಥಿಕ ಬಿಕ್ಕಟ್ಟು ಕಾಡುತ್ತಿರುವ ಸಂದರ್ಭದಲ್ಲಿ, ರಾಯಚೂರಿನಂತಹ ದೂರದೂರಿನಲ್ಲಿ ಹಮ್ಮಿಕೊಳ್ಳುವ ಸಮಾರಂಭಕ್ಕೆ ಬೆಂಗಳೂರಿನಂತಹ ನಗರಗಳ ಸಾಹಿತಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಆದರೆ ಎಲ್ಲ ಪ್ರಶ್ನೆಗಳನ್ನು ನೀವಾಳಿಸಿ ತೆಗೆಯುವಂತೆ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಸಮ್ಮೇಳನದ ಕೇಂದ್ರ ಬಿಂದುವಾಗಿದ್ದ ಬರಗೂರು ರಾಮಚಂದ್ರಪ್ಪ ಅವರ ಸಮ್ಮೇಳನಾಧ್ಯಕ್ಷರ ಭಾಷಣವಂತೂ, ನಾಡು-ನುಡಿಯ ಕುರಿತಂತೆ ಹೊಸ ಆಲೋಚನೆಯೊಂದನ್ನು ಹುಟ್ಟು ಹಾಕಿತು. ಕನ್ನಡತನವೆಂದರೆ ಕೇವಲ ಭೌಗೋಳಿಕ ಗಡಿರೇಖೆಗಳಲ್ಲ ಎನ್ನುವುದನ್ನು ತಮ್ಮ ಮಾತಿನುದ್ದಕ್ಕೂ ಒತ್ತಿ ಹೇಳಿದ ಬರಗೂರು ಅವರು, ಪ್ರಾದೇಶಿಕ ಅಸಮಾನತೆ, ರಾಜಕೀಯ ಭಿನ್ನತೆ, ಜಾತೀಯತೆ, ವರ್ಗ ಅಸಮಾನತೆ ಇವೆಲ್ಲವುಗಳನ್ನು ಅಳಿಸುತ್ತಾ ಸಾಗುವ ಮೂಲಕ ಕನ್ನಡತನವೊಂದನ್ನು ಕಟ್ಟುವ ಅಗತ್ಯವನ್ನು ಭಾಷಣದಲ್ಲಿ ಒತ್ತಿ ಹೇಳಿದರು.
 
ಬರಗೂರರ ಭಾಷಣ ಕನ್ನಡ ನಾಡಿನೊಳಗಿರುವ ಹಲವು ಕಂದಕಗಳನ್ನು ತೆರೆದಿಟ್ಟಿತು. ಮೊತ್ತ ಮೊದಲಾಗಿ ಅವರು ಬೆಟ್ಟು ಮಾಡಿದ್ದು ಪ್ರಾದೇಶಿಕ ಕಂದಕಗಳನ್ನು. ಭಾಷೆ ಮತ್ತು ಭೌಗೋಳಿಕ ಏಕೀಕರಣವು ಮಾನಸಿಕ ಏಕೀಕರಣಕ್ಕೆ ಕಾರಣವಾಗದೇ ಇರುವುದರ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಖೇದ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರಲ್ಲಿ ತೀವ್ರವಾಗುತ್ತಿರುವ ಪ್ರತ್ಯೇಕತೆಯ ಧ್ವನಿಯ ಒಳ ರಾಜಕಾರಣದ ಕಡೆಗೆ ಗಮನ ಸೆಳೆದರು. ಹಾಗೆಯೇ ಈ ಅಸಮಾನತೆಯನ್ನು ಇಲ್ಲವಾಗಿಸುವುದಕ್ಕೆ ತಮ್ಮದೇ ಆಗಿರುವ ಕೆಲವು ಸಲಹೆಗಳನ್ನೂ ಅವರು ನೀಡಿದ್ದಾರೆ. ಅದರಲ್ಲಿ ಮುಖ್ಯವಾದುದು ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕರಣಗೊಳಿಸುವುದು. ಅಭಿವೃದ್ಧಿಗೆ ಬೆಂಗಳೂರನ್ನೇ ಉತ್ತರಕರ್ನಾಟಕವೂ ನೆಚ್ಚಿಕೊಳ್ಳುವುದರಿಂದ ಆಗುತ್ತಿರುವ ಅನ್ಯಾಯ ಬಹುದೊಡ್ಡದು. ಆಡಳಿತದ ನಡುವೆ ಇದು ಬಹುದೊಡ್ಡ ಅಂತರವನ್ನು ಸೃಷ್ಟಿಸಿದೆ. ಈ ಕಂದಕವನ್ನು ತುಂಬುವುದಕ್ಕಾಗಿ ಬರಗೂರು ಇಟ್ಟಿರುವ ಸಲಹೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅವರ ಸಲಹೆ ಕೆಳಗಿನಂತಿದೆ. 

ಕರ್ನಾಟಕದ ಪ್ರತಿ ಕಂದಾಯ ವಿಭಾಗಕ್ಕೊಂದು ಸಚಿವಾಲಯವನ್ನು ಸ್ಥಾಪಿಸಬೇಕು. ಸರಕಾರದ ನೀತಿ ನಿಯಮಗಳಿಗೆ ಸಂಬಂಧಿಸಿದ ಮುಖ್ಯ ವಿಷಯಗಳನ್ನು ಮಾತ್ರ ರಾಜಧಾನಿ ಕೇಂದ್ರಿತ ಮಾಡಿ, ಉಳಿದೆಲ್ಲ ಅನುಷ್ಠಾನದ ಅಧಿಕಾರವನ್ನು ವಿಭಾಗೀಯ ಸಚಿವಾಲಯಗಳಿಗೆ ಕೊಡಬೇಕು. ಕೇವಲ ಅಧಿಕಾರವನ್ನು ಮಾತ್ರ ಕೊಟ್ಟರೆ ಸಾಲದು, ಉಪಸಮಿತಿಯು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊರಬೇಕು. ನೀತಿ ನಿಯಮ ನಿರ್ಧಾರಗಳನ್ನು ಹೊರತು ಪಡಿಸಿ ವಿಭಾಗೀಯ ಸಚಿವಾಲಯಗಳು ಸ್ವಾಯತ್ತ ಸ್ವರೂಪದಲ್ಲಿ ಕೆಲಸ ಮಾಡುವಂತಾಗಬೇಕು. ಪ್ರತಿ ಮಂಜೂರಾತಿಗೂ ಕೇಂದ್ರೀಯ ಸಚಿವಾಲಯಕ್ಕೆ ಮೊರೆ ಇಡುವುದು ಈ ಮೂಲಕ ತಪ್ಪುವಂತಾಗಬೇಕು ಎಂದು ಅವರು ಸಲಹೆ ನೀಡುತ್ತಾರೆ. ಸರಕಾರ ಇದನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎನ್ನುವುದು ಆನಂತರದ ವಿಷಯ. ಆದರೆ, ಉತ್ತರಕರ್ನಾಟಕದ ನಡುವೆ ಎದ್ದಿರುವ ಕಂದಕವನ್ನು ತುಂಬುವುದಕ್ಕೆ ಅಧಿಕಾರ ವಿಕೇಂದ್ರೀಕರಣದ ಅಗತ್ಯವಂತೂ ಇದ್ದೇ ಇದೆ. ಬರಗೂರು ಅವರು ಸೂಚಿಸಿರುವ ಪರಿಹಾರಗಳನ್ನು ಆಧಾರವಾಗಿಟ್ಟುಕೊಂಡು ಇನ್ನಷ್ಟು ಮಾರ್ಪಾಡುಗಳೊಂದಿಗೆ ಇದನ್ನು ಸರಕಾರ ಅನುಷ್ಠಾನಕ್ಕೆ ಯತ್ನಿಸಿದರೆ ಅದರಿಂದ ಉತ್ತರಕರ್ನಾಟಕದ ಅಭಿವೃದ್ಧಿಗೆ ಭಾರೀ ಕೊಡುಗೆಯನ್ನು ನೀಡಿದಂತಾಗುತ್ತದೆ. ಹಾಗೆಯೇ ಬೆಂಗಳೂರಿನ ಯಾಜಮಾನ್ಯದಿಂದ ಉತ್ತರಕರ್ನಾಟಕವನ್ನು ಪಾರು ಮಾಡಿದಂತೆಯೂ ಆಗುತ್ತದೆ.

ಇದೇ ಸಂದರ್ಭದಲ್ಲಿ ಇನ್ನೊಂದು ಕಂದಕದ ಕುರಿತಂತೆಯೂ ಅವರು ಬೊಟ್ಟು ಮಾಡಿದ್ದಾರೆ. ಅದು ಕನ್ನಡತನದ ಮೇಲೆ ಎರಗುತ್ತಿರುವ ಕೇಂದ್ರದ ಸರ್ವಾಧಿಕಾರದ ಬಗ್ಗೆ. ಅದು ಭಾಷಾ ಮಾಧ್ಯಮದ ಕುರಿತಂತೆಯೇ ಇರಲಿ ಅಥವಾ ರಾಜಕೀಯ ಅಧಿಕಾರಕ್ಕೆ ಸಂಬಂಧಪಟ್ಟಂತೆಯೇ ಇರಲಿ; ಒಕ್ಕೂಟ ವ್ಯವಸ್ಥೆ ಹೇಗೆ ಅಧೀನ ಮತ್ತು ವಿಧೇಯ ವಲಯವಾಗಿ ಮಾರ್ಪಟ್ಟಿದೆ ಎನ್ನುವುದನ್ನು ಅವರು ಎತ್ತಿ ತೋರಿಸಿದ್ದಾರೆ. ರಾಜ್ಯಗಳ ಯೋಜನೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಸ್ಥಾಪನೆಯಾಗಿದ್ದ ಯೋಜನಾ ಆಯೋಗವನ್ನು ವಿಸರ್ಜಿಸಲಾಗಿದೆ. ಆ ಜಾಗದಲ್ಲಿ ನೀತಿ ಆಯೋಗ ಬಂದಿದೆ. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ನಿರ್ಜೀವಗೊಳಿಸಲಾಗಿದೆ. ರಾಜ್ಯ ಮಂಡಳಿಯ ಸಭೆಗಳೂ ಅಸಮರ್ಪಕವಾಗಿವೆ. ಇವೆಲ್ಲವೂ ರಾಜ್ಯ ಮತ್ತು ಕೇಂದ್ರದ ನಡುವಿನ ಕಂದಕವನ್ನುವಿಸ್ತರಿಸುತ್ತಿರುವುದಕ್ಕೆಉದಾಹರಣೆಯಾಗಿದೆ ಎಂದು ಬರಗೂರು ಅಭಿಪ್ರಾಯ ಪಡುತ್ತಾರೆ. ಇದು ಹೀಗೆ ಮುಂದುವರಿದರೆ, ರಾಜ್ಯಗಳ ಸ್ವಾಯತ್ತತೆಯ ಮೇಲೆ ಕೇಂದ್ರ ಸಂಪೂರ್ಣ ಸರ್ವಾಧಿಕಾರವನ್ನು ಮೆರೆಯುತ್ತದೆ ಎಂಬ ಆತಂಕವೂ ಅವರದು. ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗದ ಸಮತೋಲನದ ಅಗತ್ಯವನ್ನು ಅವರು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು. 

ರಾಜ್ಯಗಳ ಸ್ವಾಯತ್ತತೆ ಮತ್ತು ರಾಜ್ಯಗಳೊಳಗಿನ ಸ್ವಾಯತ್ತತೆ ಎರಡೂ ಮುಖ್ಯವಾಗಬೇಕು ಎಂದು ಅವರು ಆಗ್ರಹಿಸುತ್ತಾರೆ. ಇದೇ ಸಂದರ್ಭದಲ್ಲಿ ಕನ್ನಡ ಬದುಕಿಗೆ ಸವಾಲಾಗಿರುವ ಬೇರೆ ಬೇಕೆ ಕಂದಕಗಳನ್ನು ಅವರು ಗುರುತಿಸುತ್ತಾ ಹೋಗುತ್ತಾರೆ. ಅದರಲ್ಲಿ ಮುಖ್ಯವಾಗಿ ಇಂಗ್ಲಿಷ್-ಕನ್ನಡ ಮಾಧ್ಯಮ, ಕನ್ನಡ ಮತ್ತು ತಂತ್ರಜ್ಞಾನಗಳ ನಡುವಿನ ಕಂದರಗಳನ್ನು ಅವರು ಗುರುತಿಸಿ ಅದಕ್ಕೆ ತಮ್ಮದೇ ಆದ ಪರಿಹಾರಗಳನ್ನ್ನು ಗುರುತಿಸುತ್ತಾ ಹೋಗುತ್ತಾರೆ. ಇದೇ ಸಂದರ್ಭದಲ್ಲಿ ಅವರು ಜಾತೀಯ ಕಂದರವೂ ಕನ್ನಡತನಕ್ಕೆ ಹೇಗೆ ಸಮಸ್ಯೆಯಾಗಿದೆ ಎನ್ನುವುದನ್ನು ಹೇಳುತ್ತಾರೆ. ಸರ್ಜಿಕಲ್ ದಾಳಿಯನ್ನು ಪ್ರಸ್ತಾಪಿಸುತ್ತಲೇ, ಈ ದೇಶದ ಮೇಲೆ ನಡೆದ ಮೊತ್ತಮೊದಲ ಸಾಮಾಜಿಕ ಸರ್ಜಿಕಲ್ ದಾಳಿ ದಲಿತರ ಮೇಲೆ ನಡೆಯಿತು ಎನ್ನುವುದನ್ನು ಮಂಡಿಸುತ್ತಾರೆ. ಜಾತೀಯತೆ, ವರ್ಗಸಂಘರ್ಷಗಳೆಲ್ಲವೂ ಅಳಿಯದೇ ಕೇವಲ ಭೌಗೋಳಿಕ ಗಡಿರೇಖೆಗಳಿಂದ ನಾವು ಕನ್ನಡತನವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ತಮ್ಮ ಭಾಷಣದಲ್ಲಿ ಈ ಹಿಂದಿನ ಕಟ್ಟರ್ ಎಡಪಂಥೀಯ ನೆಲೆಯಿಂದ ತುಸು ದೂರ ನಿಂತು ಎಲ್ಲರಿಗೂ ಅನ್ವಯವಾಗುವಂತೆ ಈ ಬಾರಿ ಮಾತನಾಡಿದ್ದಾರೆ. ಅನ್ನಭಾಗ್ಯ ಮೆಚ್ಚುವುದಕ್ಕೆ ಕಾಂಗ್ರೆಸ್ ಆಗಬೇಕಾಗಿಲ್ಲ, ಸರ್ಜಿಕಲ್ ದಾಳಿ ಮೆಚ್ಚುವುದಕ್ಕೆ ಬಿಜೆಪಿ ಆಗಬೇಕಾಗಿಲ್ಲ ಎಂಬ ಅವರ ಮಾತುಗಳೇ ಇದಕ್ಕೆ ಸಾಕ್ಷಿ. ಹಾಗೆಯೇ ಎಡ ಮತ್ತು ಬಲ ಎನ್ನುವ ಎರಡು ಚಿಂತನೆಗಳಿಗಷ್ಟೇ ಜೋತು ಬಿದ್ದು, ಅವಷ್ಟೇ ಸತ್ಯ ಎನ್ನುವುದರ ಕುರಿತಂತೆಯೂ ಅವರು ಮೃದುವಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ಭಾಷಣದಲ್ಲಿ ಎಲ್ಲರನ್ನೂ ಒಳಗೊಳ್ಳುವ ಅವರ ಪ್ರಯತ್ನ ಎದ್ದು ಕಾಣುತ್ತಿತ್ತು ಮತ್ತು ಅದರಲ್ಲಿ ಭಾಗಶಃ ಅವರು ಯಶಸ್ವಿಯಾಗಿದ್ದಾರೆ ಕೂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News