ಬ್ರಿಗೇಡ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

Update: 2016-12-05 17:14 GMT


 ಯಡಿಯೂರಪ್ಪ, ಕುಗ್ಗದ ಈಶ್ವರಪ್ಪ, ಕಂಗೆಟ್ಟ ಕಾರ್ಯಕರ್ತರು
ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸದಿರಲು ಬಿಎಸ್‌ವೈ ಸೂಚನೆ
ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ

ಬಿ. ರೇಣುಕೇಶ್
ಶಿವಮೊಗ್ಗ, ಡಿ. 5: ಕಳೆದ ಹಲವು ದಿನಗಳಿಂದ ರಾಜ್ಯ ಬಿಜೆಪಿ ಪಾಳೇಯದಲ್ಲಿ ತಣ್ಣಗಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಲಹ ಇದೀಗ ಮತ್ತೆ ಹೊಗೆಯಾಡಲಾರಂಭಿಸಿದೆ. ಬಿಎಸ್.ಯಡಿಯೂರಪ್ಪ ಹಾಗೂ ಕೆಎಸ್. ಈಶ್ವರಪ್ಪನಡುವೆ ಮತ್ತೊಂದು ಸುತ್ತಿನ ಹಣಾಹಣಿಗೆ ವೇದಿಕೆ ಸಿದ್ಧವಾಗುತ್ತಿದೆ. ಬಹುತೇಕ ಈ ಹಣಾಹಣಿ ಕ್ಲೈಮಾಕ್ಸ್ ಎಂದೇ ಹೇಳಲಾಗುತ್ತಿದ್ದು, ಇಬ್ಬರಲ್ಲಿ ಗೆಲ್ಲೋರು ಯಾರು? ಸೊಲೋರು ಯಾರು? ಎಂಬ ಕುತೂಹಲ ಮನೆ ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಹಾಗೂ ಬಿಎಸ್‌ವೈಯನ್ನು ಮುಖ್ಯಮಂತ್ರಿಯನ್ನಾಗಿಸುವ ಉದ್ದೇಶದಿಂದ ಬ್ರಿಗೇಡ್ ಸ್ಥಾಪಿಸಲಾಗಿದೆ ಎಂದು ಈಶ್ವರಪ್ಪ ಹೇಳಿದ್ದರು.

ಆದರೆ, ಬ್ರಿಗೇಡ್‌ಗೂ, ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಮುಖಂಡರು ಯಾರೂ ಬ್ರಿಗೇಡ್ ಸಭೆಗೆ ಹೋಗದಂತೆ ಬಿಎಸ್‌ವೈ ಕಟ್ಟಪ್ಪಣೆ ಹೊರಡಿಸಿದ್ದರು. ಹಾಗೆಯೇ ಬ್ರಿಗೇಡ್ ಕಾರ್ಯಚಟುವಟಿಕೆ ಗಳನ್ನು ಸ್ಥಗಿತಗೊಳಿಸುವಂತೆ ಈಶ್ವರಪ್ಪಗೆ ಸೂಚಿಸಿದ್ದರು. ಮತ್ತೊಂದೆಡೆ ಈಶ್ವರಪ್ಪನವರು ಬ್ರಿಗೇಡ್ ಚಟುವಟಿಕೆ ಮುಂದುವರಿಸುವುದಾಗಿ ಘೋಷಿಸಿದ್ದರು. ಅಂತಿಮವಾಗಿ ಈ ವಿಷಯ ಪಕ್ಷದ ವರಿಷ್ಠರ ಮಟ್ಟಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ.

ಇದೊಂದು ರಾಜಕೀಯೇತರ ಸಂಘಟನೆ ಎಂದು ಈಶ್ವರಪ್ಪ ಸಮಜಾಯಿಶಿ ನೀಡಿದ್ದರು. ಜೊತೆಗೆ ಬ್ರಿಗೇಡ್ ಜವಾಬ್ದಾರಿಯಿಂದ ಹೊರಬರುವುದಾಗಿಯೂ ಘೋಷಿಸಿದ್ದರು. ಬಳಿಕ ನಡೆದ ವಿದ್ಯಮಾನಗಳಲ್ಲಿ ಬ್ರಿಗೇಡ್ ಚಟುವಟಿಕೆ ನಡೆಸಲು ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಅನುಮತಿ ಪಡೆಯಲಾಗಿದೆ ಎಂದು ಹೇಳಿದ್ದರು.

ಇದಾದ ಬಳಿಕ ಬಿಎಸ್‌ವೈ ಬ್ರಿಗೇಡ್ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಮತ್ತೊಂದೆಡೆ ಈಶ್ವರಪ್ಪ ಎಂದಿನಂತೆ ಚಟುವಟಿಕೆ ಮುಂದುವರಿಸಿದ್ದರು. ರವಿವಾರ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ರವರು ಬ್ರಿಗೇಡ್ ಚಟುವಟಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಬಲಪಡಿಸಲು ಹೊರಗಿನ ವೇದಿಕೆ ಅಗತ್ಯವಿಲ್ಲ. ಪಕ್ಷದಲ್ಲಿರುವ ವಿವಿಧ ಘಟಕಗಳ ಮೂಲಕವೇ ಸಂಘಟನೆ ನಡೆಸುವಂತೆ ಸೂಚಿಸಿದ್ದು, ಈಶ್ವರಪ್ಪ ಹಾಗೂ ಅವರ ಬಣಕ್ಕೆ ಎಲ್ಲಿಲ್ಲದ ಆತಂಕ ಎದುರಾದಂತಾಗಿದೆ.


 ಅಲ್ಲದೆ, ಬಿಎಸ್‌ವೈ ಕೂಡ ಬ್ರಿಗೇಡ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬ್ರಿಗೇಡ್ ಚಟುವಟಿಕೆಗಳಲ್ಲಿ ಪಕ್ಷದ ಯಾರೊಬ್ಬರೂ ಭಾಗವಹಿಸದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ಜರಗಿಸುವ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ. ಈಶ್ವರಪ್ಪ ಬ್ರಿಗೇಡ್ ಮೂಲಕ ಬಿಜೆಪಿ ಸಂಘಟನೆ ಅನುಕೂಲ ಆಗುವಂತೆ ಪಕ್ಷದ ಹಿರಿಯ ನಾಯಕರು ಒಪ್ಪಿಗೆ ನೀಡಿಲ್ಲ. ಸಂಘಪರಿವಾರದ ಮುಖಂಡರು ಕೂಡ ಸಹಮತ ವ್ಯಕ್ತಪಡಿಸಿಲ್ಲ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.


ಮತ್ತೊಂದೆಡೆ ಈಶ್ವರಪ್ಪ ಬ್ರಿಗೇಡ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಬ್ರಿಗೇಡ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದವರ ಕಲ್ಯಾಣಕ್ಕಾಗಿ ರಾಯಣ್ಣ ಬ್ರಿಗೇಡ್ ಜನ್ಮ ತಾಳಿದೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ಸಂಘಟನೆಯಲ್ಲ. ಬೆಳಗಾವಿ ಜಿಲ್ಲೆ ನಂದಗಡದಲ್ಲಿ ಸಮಾವೇಶ ನಡೆಯಲಿದೆ ಎಂದು ಬಿಎಸ್‌ವೈಗೆ ತಿರುಗೇಟು ನೀಡಿದ್ದಾರೆ.


ಬಿಗಿಪಟ್ಟು: ರಾಯಣ್ಣ ಬ್ರಿಗೇಡ್ ಬರ್ಖಾಸ್ತುಗೊಳಿಸುವಂತೆ ಬಿಎಸ್‌ವೈ ಪಟ್ಟು ಹಿಡಿದಿದ್ದು, ಇದಕ್ಕೆ ಈಶ್ವರಪ್ಪ ಸಿದ್ಧರಿಲ್ಲ. ಈಗಾಗಲೇ ಸಂಘ ಟನೆಯ ಚಟುವಟಿಕೆ ಆರಂಭಿಸಲಾಗಿದೆ. ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಇಬ್ಬರು ಮುಖಂಡರು ಪಟ್ಟು, ಬಿಗಿಪಟ್ಟು ಹಿಡಿದಿರುವುದರಿಂದ ಸಂಧಾನಕಾರರು ಕೂಡ ಹೈರಾಣಾಗುವಂತಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.


ಈಶ್ವರಪ್ಪಗೆ ನೋಟಿಸ್ ಸಾಧ್ಯತೆ
ಬ್ರಿೇಡ್ ಚಟುವಟಿಕೆ ಮುಂದುವರಿಸಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಬಿಎಸ್. ಯಡಿಯೂರಪ್ಪ, ಈಶ್ವರಪ್ಪಗೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತೊಮ್ಮೆ ದೂರು ನೀಡಲು ನಿರ್ಧರಿಸಿದ್ದು, ಈ ಬಾರಿ ಈಶ್ವರಪ್ಪಗೆ ಶತಾಯಗತಾಯ ತಕ್ಕ ಪಾಠ ಕಲಿಸುವ ನಿರ್ಧಾರ ಮಾ
ಡಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. ಮತ್ತೊಂದೆಡೆ ಬಿಜೆಪಿಯಲ್ಲಿರುವ ಬಿಎಸ್‌ವೈ ವಿರೋಧಿ ಬಣವು ಈಶ್ವರಪ್ಪಗೆ ಬೆಂಬಲವಾಗಿ ನಿಂತು ಕೊಂಡಿದೆ. ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಜರಗಿಸುವುದು ಬಿಎಸ್‌ವೈಗೆ ಅಷ್ಟು ಸುಲಭದ ಕೆಲಸವಲ್ಲ ಎಂದು ೀ ಶ್ವರಪ್ಪನವರ ಆಪ್ತ ಮೂಲಗಳು ಹೇಳುತ್ತವೆ.


ಸಂಧಾನ ವಿಫಲ
ಕಳೆದ ಕೆಲ ತಿಂಗಳ ಹಿಂದೆ ಶಿವ ಮೊಗ್ಗ ನಗರದಲ್ಲಿ ಎಬಿವಿಪಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಬಿಎಸ್.ಯಡಿಯೂರಪ್ಪಹಾಗೂ ಈಶ್ವರಪ್ಪಮುಖಾಮುಖಿಯಾಗಿದ್ದರು. ಈ ವೇಳೆ ಸಂಘಪರಿವಾರದ ಮುಖಂಡರ ಸಮ್ಮುಖದಲ್ಲಿ ಈ ಇಬ್ಬರು ಮುಖಂಡರು ಬ್ರಿಗೇಡ್ ಬಗ್ಗೆ ಚರ್ಚೆ ನಡೆಸಿದ್ದರು. ಇವರಿಬ್ಬರ ನಡುವೆ ರಾಜೀ ಸಂಧಾನ ಏರ್ಪಟ್ಟಿತ್ತು ಎಂಬ ಮಾಹಿತಿ ೇಳಿಬಂದಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ ಈ ಸಂಧಾನ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News