ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲುವುದಿಲ್ಲ: ಕೆ.ಎಸ್.ಈಶ್ವರಪ್ಪ

Update: 2016-12-06 14:03 GMT

ಬೆಳಗಾವಿ, ಡಿ.6: ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯದ ಕಲ್ಯಾಣಕ್ಕಾಗಿ ರಚಿಸಲಾಗಿರುವ ‘ಕ್ರಾಂತಿ ವೀರ’ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಗುಡುಗಿದ್ದಾರೆ.

ಮಂಗಳವಾರ ಬೆಳಗಾವಿಯ ನಂದಗಡದಲ್ಲಿ ನಡೆದಂತಹ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಈ ಸಂಘಟನೆಯನ್ನು ರಚಿಸಲಾಗಿದೆ ಎಂದರು.
 ದೇಶದ ಸ್ವಾತಂತ್ರಕ್ಕಾಗಿ ತನ್ನ ಪ್ರಾಣವನ್ನೆ ಬಲಿಕೊಟ್ಟ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಹಿಂದುಳಿದವರಿಗೂ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಈ ಬ್ರಿಗೇಡ್ ಸ್ಥಾಪನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಲ್ಪಟ್ಟ ಕೂಡಲಸಂಗಮದಲ್ಲಿ ಜ.26ರಂದು ಬ್ರಿಗೇಡ್‌ನ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಈಶ್ವರಪ್ಪ ಹೇಳಿದರು.

 ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಲ್ಲಿ ಯಾವುದೆ ಗೊಂದಲಗಳಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕ ರಾಮ್‌ಲಾಲ್ ಜೊತೆ ಬೆಂಗಳೂರಿನಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ರಾಯಣ್ಣ ಬ್ರಿಗೇಡ್‌ನ ಧ್ಯೇಯೋದ್ದೇಶಗಳ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ತುಮಕೂರಿನಲ್ಲಿ ನಡೆದಂತಹ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ತನಗೆ ನೀಡಿದ್ದ ಸೂಚನೆಯನ್ನು ಪಾಲಿಸಿದ್ದೆ ಎಂದು ಅವರು ಹೇಳಿದರು.

ಆದರೆ, ನಂತರದ ದಿನಗಳಲ್ಲಿ ರಾಯಣ್ಣ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳಿಂದ ದೂರವಿರುವಂತೆ ನನಗೆ ಯಾವುದೆ ಸೂಚನೆಗಳು ಬಂದಿಲ್ಲ. ನಾನು ಆರೆಸೆಸ್ಸ್‌ನ ನಿಷ್ಠಾವಂತ ಕಾರ್ಯಕರ್ತ. ಸಂಘದ ಪ್ರಮುಖರು ತನ್ನ ಜೊತೆ ರಾಯಣ್ಣ ಬ್ರಿಗೇಡ್ ಕುರಿತು ಮಾತುಕತೆ ನಡೆಸಿದ್ದಾರೆ. ಅವರಿಗೂ ಎಲ್ಲ ಮಾಹಿತಿಯನ್ನು ಒದಗಿಸಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಳ್ಳುವಂತೆ ಪಕ್ಷದ ಯಾವುದೆ ಕಾರ್ಯಕರ್ತರಿಗೆ ಬಲವಂತ ಮಾಡುವುದಿಲ್ಲ. ಸ್ವ ಇಚ್ಛೆಯಿಂದ ಯಾರೂ ಬೇಕಾದರೂ ಬರಬಹುದು. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಂಘಟನೆಯನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ, ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿಗಾಗಿ ಕನಿಷ್ಠ 10 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

ರಾಯಣ್ಣ ಬ್ರಿಗೇಡ್ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ. ಈ ಸಮಾರಂಭದಲ್ಲಿ ಎಲ್ಲ ಜಾತಿಯ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ. ನಾವು ಈಗಾಗಲೆ ಸಾಕಷ್ಟು ಶ್ರಮವಹಿಸಿದ್ದೇವೆ. ಈಗ ಇದರ ಫಲ ಪಡೆಯುವ ಸಮಯ ಬಂದಿದೆ. ಇಂದು ನಡೆಸುತ್ತಿರುವ ಸಮಾರಂಭ ಕಾಟಾಚಾರದ್ದಲ್ಲ. ನಿಜವಾದ ಹೋರಾಟ ಇಂದಿನಿಂದ ಪ್ರಾರಂಭ ಎಂದು ಅವರು ಹೇಳಿದರು.

ಸಮುದ್ರ ಮಂಥನದಲ್ಲಿ ಸಾಕಷ್ಟು ಕಿತ್ತಾಟ ಆಯ್ತು. ಮೊದಲು ಬಂದಿದ್ದ ವಿಷ, ಆನಂತರ ಅಮೃತ ಬಂತು. ಅದೇ ರೀತಿ ಈಗ ನೋಟಿಸ್ ಬಂದಿದೆ. ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬರುತ್ತವೆ. ಆದುದರಿಂದ, ಯಾವ ನೋಟಿಸ್‌ಗಳಿಗೂ ಹೆದರುವ ಪ್ರಶ್ನೆಯೆ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ವರಿಷ್ಠರ ಎಚ್ಚರಿಕೆಗೆ ಮಣಿಯದ ಈಶ್ವರಪ್ಪ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಾಗೂ ಬಿಜೆಪಿ ಪಕ್ಷಕ್ಕೆ ಯಾವುದೆ ಸಂಬಂಧವಿಲ್ಲ. ಬ್ರಿಗೇಡ್‌ನ ಸಭೆ, ಸಮಾರಂಭ ಗಳಲ್ಲಿ ಪಾಲ್ಗೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ನೀಡಿದ ಎಚ್ಚರಿಕೆಗೆ ಮಣಿಯದ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೂ ಇಂದಿನ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

 ಸಮಾರಂಭದಲ್ಲಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಅಮರೇಶ್ವರ ಮಹಾರಾಜ, ಮುಗಳಖೋಡದ ಚಿನ್ಮಯನಂದ ಸ್ವಾಮಿ, ಶಾಂತಾನಂದ ಸ್ವಾಮಿ, ಸೇವಾಲಾಲ್ ಸ್ವಾಮಿ, ಮರಳುಶಂಕರ ಸ್ವಾಮಿ, ಸಂಗಮಾನಂದ ಸ್ವಾಮಿ, ಮುಖಂಡರಾದ ಕೆ.ವಿರೂಪಾಕ್ಷಪ್ಪ, ಕೆ.ಮುಕುಡಪ್ಪ, ಮಾಜಿ ಸಚಿವರಾದ ರವೀಂದ್ರನಾಥ್, ಸೊಗಡು ಶಿವಣ್ಣ, ಮಾಜಿ ಶಾಸಕ ನೇಮಿರಾಜ್ ನಾಯಕ್, ಜಗದೀಶ್ ಮೆಟಗುಡ, ಸೋಮಣ್ಣ ಬೇವಿನಮರದ, ನಿರ್ಮಾಪಕ ಆನಂದ ಅಪ್ಪುಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News