×
Ad

ಶಿವಮೊಗ್ಗ ಜಿಲ್ಲಾದ್ಯಂತ ಹೆಚ್ಚುತ್ತಿರುವ ದೋ ನಂಬರ್ ದಂಧೆ!

Update: 2016-12-06 23:16 IST


ಬಿ. ರೇಣುಕೇಶ್
ಶಿವಮೊಗ್ಗ, ಡಿ. 6: ಶಿವಮೊಗ್ಗ ನಗರದಲ್ಲಿ ಮತ್ತೆ ‘ದೋ ನಂಬರ್ ದಂಧೆ’ಗಳು ಹೆಚ್ಚಾಗಿದ್ದು, ಜೂಜಾಟ, ವೇಶ್ಯಾವಾಟಿಕೆ, ಅಕ್ರಮ ಮದ್ಯ ಮಾರಾಟ, ಕೆಲ ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಜೂಜಾಟ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಮತ್ತೆ ಗರಿಗೆದರಲಾರಂಭಿಸಿದೆ.


ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ಅವಧಿಯಲಿ  ಶಿವಮೊಗ್ಗ ಜಿಲ್ಲಾದ್ಯಂತ ಕೆಲ ರಿ ಕ್ರಿಯೇಷನ್ ಕ್ಲಬ್‌ಗಳಲ್ಲಿ ನಡೆಯುತ್ತಿದ್ದ ಜೂಜಾಟ, ಹೈಟೆಕ್ ವೇಶ್ಯಾವಾಟಿಕೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಣ್ಣಪುಟ್ಟ ‘ದೋ ನಂಬರ್‌ದಂಧೆ’ಗಳನ್ನು ಹತ್ತಿಕ್ಕಲು ಈ ದಂಧೆಯಲ್ಲಿ ತೊಡಗಿದ್ದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಿದ್ದರು. ಕೆಲ ಕಿಂಗ್‌ಪಿನ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸುವ ಕೆಲಸ ಕೂಡ ಮಾಡಿದ್ದರು. ಹಾಗೆಯೇ ಈ ದಂಧೆಯಲ್ಲಿ ತೊಡಗಿದ್ದ ಕ್ರಿಮಿನಲ್‌ಗಳಿಗೆ ಪೊಲೀಸ್ ಠಾಣೆಗಳಲ್ಲಿ ‘ಲಾಠಿ ರುಚಿ’ ನೀಡಿದ್ದ ಪರಿಣಾಮ ಹಲವು ದಂಧೆಕೋರರು ತಾವು ನಡೆಸುತ್ತಿದ್ದ ಕಾನೂನುಬಾಹಿರ ಕೃತ್ಯಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದರು.

ಹಾಗೆಯೇ ವೇಶ್ಯಾವಾಟಿಕೆ, ಜೂಜಾಟ ಮತ್ತಿತರ ಕಾನೂನುಬಾಹಿರ ಕೃತ್ಯಗಳಿಗೆ ಅವಕಾಶ ಕಲ್ಪಿಸುತ್ತಿದ್ದ ಮನೆ, ಲಾಡ್ಜ್, ಹೊಟೇಲ್ ಮಾಲಕರ ವಿರುದ್ಧವೂ ರವಿ ಡಿ. ಚೆನ್ನಣ್ಣನವರ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದ್ದರು. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ‘ದೋ ನಂಬರ್ ದಂಧೆ’ಗಳಿಗೆ ಕಡಿವಾಣ ಬಿದ್ದಿತ್ತು. ಹೆಚ್ಚುತ್ತಿದೆ: ಆದರೆ ಕೆಲ ತಿಂಗಳುಗಳಿಂದ ನಗರದಲ್ಲಿ ಮತ್ತೆ ‘ದಂಧೆ’ಗಳು ತಲೆ ಎತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿವೆ. ಅದರಲ್ಲಿಯೂ ವಿಶೇಷವಾಗಿ ವೇಶ್ಯಾವಾಟಿಕೆ, ಜೂಜಾಟ ನಗರದ ವಿವಿಧೆಡೆ ಎಗ್ಗಿಲ್ಲದೆ ನಡೆಯಲಾರಂಭಿಸಿದೆ. ಅಲ್ಲದೆ, ಶಿವಮೊಗ್ಗ ನಗರದ ಹೊರವಲಯದ ಬಡಾವಣೆಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಜೋರಾಗಿಯೇ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಹೊರವಲಯದ ಗಾಡಿಕೊಪ್ಪ, ಆಲ್ಕೋಳ, ಸೋಮಿನಕೊಪ್ಪ ಕೆ.ಎಚ್.ಬಿ. ಕಾಲೋನಿ ಸೇರಿದಂತೆ ಹಲವು ಪ್ರತಿಷ್ಠಿತ ಬಡಾವಣೆಗಳ ನಿರ್ಜನ ಪ್ರದೇಶಗಳಲ್ಲಿ ಬಾಡಿಗೆ ಆಧಾರದ ಮೇಲೆ ಮನೆ ಪಡೆದುಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆಗಳು ಸದ್ದಿಲ್ಲದೆ ನಡೆಯುತ್ತಿರುವ ಮಾಹಿತಿಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಒಂದೆಡೆ ಹಲವು ಅಮಾಯಕ ಹೆಣ್ಣು ಮಕ್ಕಳು ಈ ಜಾಲಕ್ಕೆ ಸಿಲುಕಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹಲವು ಪುರುಷರು ಜಾಲದ ‘ಬ್ಲ್ಯಾಕ್‌ಮೇಲ್’ಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೂಜು ಜೋರು: ಕೆಲ ಕ್ರಿಯೇಷನ್ ಕ್ಲಬ್‌ಗಳಲ್ಲಿ ಗುಪ್ತವಾಗಿ ಜೂಜಾಟ ನಡೆಯಲಾರಂಭಿಸಿವೆ. ಹಾಗೆಯೇ ನಗರದ ಹೊರವಲಯದ ಪ್ರದೇಶಗಳಲ್ಲಿಯೂ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಭರ್ಜರಿಯಾಗಿಯೇ ನಡೆಯುತ್ತಿವೆ.

ಉಳಿದಂತೆ ಒ.ಸಿ. ದಂಧೆ ಬಹುತೇಕ ನಗರದಾದ್ಯಂತ ಮತ್ತೆ ತನ್ನ ಕಬಂಧ ಬಾಹು ಚಾಚಿದ್ದು, ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಗಮನಹರಿಸಬೇಕಾಗಿದೆ: ಎಸ್ಪಿ ಅಭಿನವ್ ಖರೆ ಅವರು ಪ್ರಾಮಾಣಿಕ, ಧಕ್ಷ ಅಧಿಕಾರಿಯಾದ್ದು, ಈಗಾಗಲೇ ಜಿಲ್ಲೆಯಲ್ಲಿ ಬಾಲ ಬಿಚ್ಚುತ್ತಿದ್ದ ಹಲವು ರೌಡಿ ಗುಂಪುಗಳಿಗೆ ತಕ್ಕ ಶಾಸ್ತಿ ಮಾಡುವ ಕೆಲಸ ನಡೆಸಿದ್ದಾರೆ. ಪ್ರಸ್ತುತ ಗರಿಗೆದರಲಾರಂಭಿಸಿರುವ ವೇಶ್ಯಾವಾಟಿಕೆ, ಜೂಜು ಮತ್ತಿತರ ಸಣ್ಣಪುಟ್ಟ ದೋ ನಂಬರ್ ದಂಧೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕಾಗಿದೆ. ತಮ್ಮ ಕೆಲಸವನ್ನೇ ಮರೆತಂತಿರುವ ಕೆಲ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಚುರುಕು ಮುಟ್ಟಿಸುವ ಕೆಲಸದ ಜೊತೆಗೆ ದಂಧೆಕೋರರಿಗೆ ಇಲಾಖೆಯ ಬಿಸಿ ಮುಟ್ಟಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News