×
Ad

ಕೊಳವೆ ಬಾವಿ ನಿರ್ಬಂಧಕ್ಕೆ ವಿರೋಧ

Update: 2016-12-06 23:20 IST

ಶಿವಮೊಗ್ಗ, ಡಿ. 6: ಕೊಳವೆ ಬಾವಿ ಕೊರೆಯಿಸಲು ರಾಜ್ಯ ಸರಕಾರ ವಿಧಿಸಿರುವ ನಿರ್ಬಂಧ ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹೊಸನಗರ ತಾಲೂಕಿನ ಬೆಳೆ ರಕ್ಷಣಾ ಒಕ್ಕೂಟವು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿತು. ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಮಲೆನಾಡು ಭಾಗದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಆವರಿಸಿದೆ. ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಬೋರ್‌ವೆಲ್, ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿತವಾಗಿದೆ. ಇದರಿಂದ ಕುಡಿಯಲು ನೀರಿಗೂ ನಾಗರಿಕರು ಪರದಾಡುವಂತಾಗಿದೆ.

ಮತ್ತೊಂದೆಡೆ ರೈತರು ಕಷ್ಟಪಟ್ಟು ಬೆಳೆದ ತೋಟ ಮತ್ತಿತರ ಬೆಳೆಗಳ ಸಂರಕ್ಷಣೆಗೆ ಪರದಾಡುವಂತಾಗಿದೆ. ನೀರಿಲ್ಲದೆ ಬೆಳೆಗಳು ಹಾಳಾಗುತ್ತಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ಬೆಳೆ ಸಂರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸಾಧ್ಯವಿಲ್ಲದಂತಾಗಿದೆ. ಇತ್ತೀಚೆಗೆ ರಾಜ್ಯ ಸರಕಾರವು ಹೊಸದಾಗಿ ಕೊಳವೆ ಬಾವಿ ಕೊರೆಯಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವುದರಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕೂಡಲೇ ಮಲೆನಾಡು ಭಾಗದಲ್ಲಿ ಆವರಿಸಿರುವ ಬರಗಾಲ ಪರಿಸ್ಥಿತಿ ಗಮನಿಸಿ, ರೈತ ಸಮುದಾಯದ ಸ್ಥಿತಿಗತಿಯ ಅವಲೋಕನ ನಡೆಸಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಲು ಅನುಮತಿ ನೀಡಬೇಕು. ಪ್ರಸ್ತುತ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರ ಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಎಂ.ಎಸ್.ಉಮೇಶ್, ಟಿ.ಆರ್.ಕೃಷ್ಣಪ್ಪ, ಜಾವೀದ್, ರಾಮಚಂದ್ರ, ರವೀಂದ್ರ, ಪ್ರಕಾಶ್, ಕಿರಣ್, ಬಸಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News