ಅಪರಿಚಿತ ಮಹಿಳೆಯ ಕೊಲೆ ಪ್ರಕರಣ: ಸಿಗದ ಸುಳಿವು
ಶಿವಮೊಗ್ಗ, ಡಿ. 6: ನಗರದ ಹೊರವಲಯ ತೀರ್ಥಹಳ್ಳಿ ರಸ್ತೆಯ ಹರಕೆರೆ ದೇವಾಲಯದ ಸಮೀಪದ ಪೆಟ್ರೋಲ್ ಬಂಕ್‌ವೊಂದರ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಅರೆಬೆತ್ತಲೆ ಹಾಗೂ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇಡೀ ಪ್ರಕರಣ ನಿಗೂಢವಾಗಿ ಪರಿಣಮಿಸಿದ್ದು, ಮಹಿಳೆಯ ಹತ್ಯೆ ನಡೆಸಿದವರು ಯಾರು? ಎಂಬುದು ಪೊಲೀಸ್ ಇಲಾಖೆಗೂ ಕಗ್ಗಂಟಾಗಿ ಪರಿಣಮಿಸಿದೆ.
ಶವ ಪತ್ತೆಯಾಗಿತ್ತು: ಮೃತ ಮಹಿಳೆಗೆ ಸರಿಸುಮಾರು 25 ರಿಂದ 30 ವರ್ಷ ಪ್ರಾಯವಿದೆ. ಶವವು ಅರ್ಧಂಬರ್ಧ ಸುಟ್ಟಿದ್ದು, ಮೈಮೇಲೆ ಅರೆಬರೆ ಬಟ್ಟೆಯಿತ್ತು. ಇದರಿಂದ ಕೊಲೆ ಅನುಮಾನ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ತುಂಗ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣದಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಗಿರೀಶ್‌ರವರು ತನಿಖೆ ಮುಂದುವರಿಸಿದ್ದಾರೆ. ಸಿಗದ ಸುಳಿವು: ಮೃತ ಮಹಿಳೆಯ ಹೆಸರು, ವಿಳಾಸ ಮತ್ತಿತರ ಮಾಹಿತಿ ಪೊಲೀಸರಿಗೆ ತಿಳಿಯದ ಹಿನ್ನೆಲೆಯಲ್ಲಿ ಈ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ. ಪೊಲೀಸ್ ಇಲಾಖೆಯು ಮಹಿಳೆಯ ಪೂರ್ವಾಪರ ಪತ್ತೆಗೆ ವ್ಯಾಪಕ ಕ್ರಮಕೈಗೊಂಡಿದೆ. ಮಾಧ್ಯಮಗಳ ಮೂಲಕ ಪ್ರಕಟನೆ ಕೂಡ ಹೊರಡಿಸಿದೆ.
ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ಕೂಡ ರವಾನಿಸಿದ್ದು, ಇಲ್ಲಿಯವರೆಗೂ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲವೆನ್ನಲಾಗಿದೆ. ಮಹಿಳೆಯ ಹಿನ್ನೆಲೆ ತಿಳಿದುಬಂದರೆ ಪ್ರಕರಣದ ತನಿಖೆ ಚುರುಕುಗೊಳ್ಳಲಿದೆ. ಸಾವಿನ ಹಿನ್ನೆಲೆ ಗೊತ್ತಾಗಲಿದೆ. ಕೊಲೆಯೋ? ಆತ್ಮಹತ್ಯೆಯೋ? ಎಂಬುದು ಸ್ಪಷ್ಟವಾಗಲಿವೆ.
ಒಂದು ವೇಳೆ ಕೊಲೆಯಾಗಿದ್ದರೆ ಇದರ ಹಿಂದಿರುವ ದುಷ್ಕರ್ಮಿಗಳ್ಯಾರು? ಕಾರಣವೇನು? ಎಂಬಿತ್ಯಾದಿ ವಿವರ ಪತ್ತೆ ಹಚ್ಚಬಹುದಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೋರ್ವರು ಹೇಳುತ್ತಾರೆ. ಒಟ್ಟಾರೆ ಅಪರಿಚಿತ ಮಹಿಳೆ ಅನುಮಾನಾಸ್ಪದ ಸಾವು ಹರಕೆರೆ ಸುತ್ತಮುತ್ತಲಿನ ಏರಿಯಾಗಳಲ್ಲಿ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಿಗೂಢ ಸಾವಿನ ಹಿಂದಿರುವ ಸತ್ಯವೆನೆಂಬುವುದು ಪೊಲೀಸರ ಪ್ರಾಮಾಣಿಕ ತನಿಖೆಯಿಂದ ಇನ್ನಷ್ಟೇ ಬಯಲಾಗಬೇಕಾಗಿದೆ.