×
Ad

ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಚಾಲಕ ಆತ್ಮಹತ್ಯೆ

Update: 2016-12-07 15:33 IST

ಮಂಡ್ಯ, ಡಿ.7: ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಗೌಡ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ ಹಾಗೂ ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ 100ಕೋಟಿ ರೂ. ಕಪ್ಪುಹಣ ವ್ಯವಹಾರಕ್ಕೆ ಸಂಬಂಧಿಸಿ ತನಗೆ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ರಮೇಶ್ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದರು.

ಸಮೃದ್ದಿ ಲಾಡ್ಜ್‌ನ ರೂಂ.ನಂ.14ನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬುಧವಾರ ಮಧ್ಯಾಹ್ನ ನಮಗೆ ಮಾಹಿತಿ ಬಂದಿತ್ತು. ಶವದ ಬಳಿ ಡೆತ್‌ನೋಟು ಪತ್ತೆಯಾಗಿದೆ. ರೆಡ್ಡಿ ಹಾಗೂ ಬಿಜೆಪಿ ಎಂಪಿ ಶ್ರೀರಾಮುಲು ಆಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಲಾಗಿದೆ ಎಂದು ಮಂಡ್ಯ ಎಸ್ಪಿ ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ 100 ಕೋಟಿ ರೂ. ಕಪ್ಪುಹಣವನ್ನು ಬಿಳಿಯಾಗಿಸಿದ್ದ ವಿಷಯ ತನಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಅವರಿಂದ ನನಗೆ ಬೆದರಿಕೆ ಕರೆ ಬರುತ್ತಿದ್ದವು ಎಂದು ಡೆತ್‌ನೋಟ್‌ನಲ್ಲಿ ಗೌಡ ಬರೆದಿದ್ದಾರೆ. ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಅವರು ರೆಡ್ಡಿಗೆ ಕಪ್ಪುಹಣ ಬಿಳಿ ಮಾಡಲು ನೆರವಾಗಿದ್ದು, ಅದಕ್ಕಾಗಿ ಶೇ.20ರಷ್ಟು ಕಮಿಶನ್ ಪಡೆದಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಗೌಡ ಆರೋಪಿಸಿದ್ದಾರೆ.

ಕಾರು ಚಾಲಕ ರಮೇಶ್ ಗೌಡ ಹಾಗೂ ವಿಶೇಷ ಭೂಸ್ವಾದೀನಾಧಿಕಾರಿ ಭೀಮಾ ನಾಯ್ಕ್ ನಡುವಿನ ವೈಯಕ್ತಿಕ ವಿಷಯ ಇದಾಗಿದೆ. ಚಾಲಕನ ಕೈಯ್ಯಲ್ಲಿ 10 ಕೋಟಿ ರೂ.ನೀಡಲು ಯಾರೂ ಮೂರ್ಖರಲ್ಲ ಎಂದು ಬಿಜೆಪಿ ಸಂಸದ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಐದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ರೆಡ್ಡಿ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತನ್ನ ಮಗಳ ಮದುವೆಯನ್ನು 500 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಿದ್ದರು. ಜನರು ನೋಟು ಅಮಾನ್ಯದಿಂದ ಪರದಾಡುತ್ತಿದ್ದ ಸಮಯದಲ್ಲಿ ರೆಡ್ಡಿ ಅದ್ದೂರಿ ಮದುವೆ ನಡೆಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News