×
Ad

ಕೆಎಎಸ್ ಅಧಿಕಾರಿ ಭೀಮಾ ನಾಯಕ್ ವಿರುದ್ಧ ಎಫ್‌ಐಆರ್

Update: 2016-12-07 18:08 IST

ಮಂಡ್ಯ, ಡಿ.7: ಬೆಂಗಳೂರು ನಗರ ವಿಶೇಷ ಭೂಸ್ವಾಧೀನ ಅಧಿಕಾರಿ ಎಲ್.ಭೀಮಾ ನಾಯಕ್ ಅವರ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ನಾಯಕ್ ವಿರುದ್ಧ ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಲ್.ಭೀಮಾ ನಾಯಕ್ ಅವರ ಕಾರು ಚಾಲಕನಾಗಿದ್ದ ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿಯ ಕೆ.ಸಿ.ರಮೇಶ್ ಮಂಗಳವಾರ ಸಂಜೆ ಮದ್ದೂರಿನ ಶಿವಪುರ ಕೊಪ್ಪ ಸರ್ಕಲ್‌ನಲ್ಲಿರುವ ಸಮೃದ್ಧ್ ಲಾಡ್ಜ್‌ನಲ್ಲಿ 6 ಪುಟಗಳ ಡೆತ್‌ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತನ್ನ ನೂರಾರು ಕೋಟಿ ರೂ. ಅಕ್ರಮ ಆಸ್ತಿಯನ್ನು ಬಹಿರಂಗಪಡಿಸಬಾರದೆಂದು ಭೀಮಾ ನಾಯಕ್ ನನಗೆ ಕಿರುಕುಳ ನೀಡುತ್ತಿದ್ದು, ಇದರಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರಮೇಶ್ ಡೆತ್‌ನೋಟ್‌ನಲ್ಲಿ ಬರೆದಿದ್ದರು.

 ರಮೇಶ್ ಅವರ ಸಹೋದರ ಕೆ.ಸಿ.ಮಹೇಂದ್ರ ಅವರು ತನ್ನ ತಮ್ಮನ ಸಾವಿಗೆ ಭೀಮಾ ನಾಯಕ್ ಮತ್ತು ಆವರ ಕಾರು ಚಾಲಕ ಮುಹಮ್ಮದ್ ಕಾರಣವೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ, ಪೊಲೀಸರು ಭೀಮಾ ನಾಯಕ್ ಮತ್ತು ಮುಹಮ್ಮದ್ ವಿರುದ್ಧ ಐಪಿಸಿ ಕಲಂ 306 ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

 ಎಲ್.ಭೀಮಾ ನಾಯಕ್ ಸಂಪಾದಿಸಿದ್ದ ನೂರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ಬಗ್ಗೆ ನನ್ನ ತಮ್ಮನಿಗೆ ತಿಳಿದಿತ್ತು. ಅದಲ್ಲದೆ ನನ್ನ ತಮ್ಮನ ಬ್ಯಾಂಕ್ ಖಾತೆ ಮೂಲಕವೂ ತನ್ನ ಸಂಬಂಧಿಕರಿಗೆ ಭೀಮಾ ನಾಯಕ್ ಹಣವನ್ನು ವರ್ಗಾವಣೆ ಮಾಡಿದ್ದರು ಎಂದು ಮಹೇಂದ್ರ ದೂರಿನಲ್ಲಿ ಆರೋಪಿಸಿದ್ದಾರೆ.

ತಾನು ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ಮತ್ತು ಹಣದ ವಿವರವನ್ನು ಬಹಿರಂಗಪಡಿಸಬಹುದೆಂದು ಭೀಮಾ ನಾಯಕ್ ನನ್ನ ತಮ್ಮನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದುದ್ದಲ್ಲದೆ, ರೌಡಿಗಳಿಂದಲೂ ಕೊಲೆ ಬೆದರಿಕೆ ಹಾಕಿದ್ದರು ಎಂದೂ ಮಹೇಂದ್ರ ದೂರಿದ್ದಾರೆ.

ತನಗೆ ಭೀಮಾ ನಾಯಕ್ ಮತ್ತು ಮುಹಮ್ಮದ್ ಅವರು ಕಿರುಕುಳ ನೀಡುತ್ತಿದ್ದುದ್ದನ್ನು ರಮೇಶ್ ನಮ್ಮ ಕುಟುಂಬ ಹಾಗೂ ಸ್ನೇಹಿತರ ಬಳಿ ತೋಡಿಕೊಂಡಿದ್ದ. ಆತನಿಗೆ ಧೈರ್ಯವನ್ನು ಹೇಳಿದ್ದೆವು ಎಂದು ಮಹೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ಡಿ.4 ರಂದು ಬೆಳಗ್ಗೆ ನಮ್ಮ ಗ್ರಾಮದ ಮನೆಗೆ ಬಂದಿದ್ದ ರಮೇಶ್ ತನಗಿರುವ ಕಿರುಕುಳದ ಬಗ್ಗೆ ಹೇಳಿ ಮಧ್ಯಾಹ್ನದ ವೇಳೆಗೆ ಹೊರಟ. ಆದರೆ, ಬೆಂಗಳೂರಿಗೆ ತೆರಳದೆ ಶಿವಪುರದ ಸಮೃದ್ಧ್ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಅವರು ದೂರಿನಲ್ಲಿ ಹೇಳಿದ್ದಾರೆ.

 ಮಹೇಂದ್ರ ಅವರು ನೀಡಿದ ದೂರಿನನ್ವಯ ಭೀಮಾ ನಾಯಕ್ ಮತ್ತು ಮುಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮದ್ದೂರು ಪೊಲೀಸರು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News