×
Ad

ಸರಕಾರಿ ಆಸ್ಪತ್ರೆಯಲ್ಲಿ ಮಗು ಅಪಹರಣ : ಪತ್ತೆಗೆ ಆಗ್ರಹಿಸಿ ಪ್ರತಿಭಟನೆ

Update: 2016-12-08 20:11 IST

ಹಾಸನ, ಡಿ.8 : ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಮಗು ಅಪಹರಣವನ್ನು ಶೀಘ್ರ ಪತ್ತೆ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಯುವಸೇನೆವತಿಯಿಂದ ಆಕೆಯ ಸಂಬಂಧಿಕರು ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

 ಘಟನೆಯ ವಿವರ:

     ಸಕಲೇಶಪುರ ತಾಲೂಕು ಕುಶಾಲನಗರದ ನಿವಾಸಿ ಮಾದೇವಿ ಅವರು   ನಗರದ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಮಧ್ಯಾಹ್ನದಿಂದ  ವಾಂತಿ ಮಾಡಿಕೊಳ್ಳುವುದನ್ನು ಮಹಿಳೆ ಗಮನಿಸಿದ್ದು, ಸಂಜೆ 5-30ರ ಸಮಯದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ, ನರ್ಸ್ ಧರಿಸುವ ಬಿಳಿ ವಸ್ತ್ರ ತೊಟ್ಟು ಮಾದೇವಿ ವಾರ್ಡ್‌ಗೆ ಬಂದಿದ್ದಾಳೆ. 'ವಾಂತಿ ಮಾಡುತ್ತಿರುವುದರಿಂದ ಮಗುವನ್ನು ಪರೀಕ್ಷೆ ಮಾಡಲು ವೈದ್ಯರು ಸೂಚಿಸಿದ್ದಾರೆ. ನೀವು ದಾಖಲಾಗಿರುವ ಕಾರ್ಡ್ ತರಬೇಕು'  ಎಂದು ಮೊದಲು ಮಗುವನ್ನು ಕೊಂಡೊಯ್ದಿದ್ದಾಳೆ . ಕಾರ್ಡ್ ತರುವಷ್ಟರಲ್ಲಿ ಮಗುವಿನ ಜೊತೆ ನರ್ಸ್ ವೇಷದಾರಿ ಅಲ್ಲಿಂದ ಕಣ್ಮರೆಯಾಗಿದ್ದಳು. 

 ಪ್ರತಿಭಟನೆ :

ಮಗುವನ್ನು ಅಪಹರಿಸಿ ಕಳ್ಳ ಸಾಗಣಿಕೆ ಮಾಡುವುದು ಬೆಳಕಿಗೆ ಬಂದಿದೆ. ಮಕ್ಕಳ ಮತ್ತು ಮಾನವ ಕಳ್ಳ ಸಾಗಾಣೆ ಜಾಲ ಹಾಸನದಲ್ಲಿ ಕೆಲಸ ನಿರ್ವಹಿಸುತ್ತಿರುವದರ ಬಗ್ಗೆ ಅನುಮಾನವಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

       ಹಾಡಹಗಲೆ ಇಂತಹ ಘಟನೆ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿರುವುದಕ್ಕೆ  ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ . ಸಂಬಂಧಪಟ್ಟವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು.

ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳು ಕಳಪೆ ಗುಣಮಟ್ಟದಾಗಿರುವುದರಿಂದ ಚಿತ್ರಗಳು ಅಸ್ಪಷ್ಟವಾಗಿ ಗೋಚರಿಸಿದೆ . ಸಿಸಿ ಕ್ಯಾಮರಕ್ಕೆ ಲಕ್ಷಾಂತರ ರೂ ವವೆಚ್ಚ ಮಾಡಿದರೂ ಕಳಪೆ ಗುಣಮಟ್ಟದ ಕೆಲಸ ಮಾಡಿರುವ ಗುತ್ತಿಗೆದಾರರನ್ನು  ಕಪ್ಪು ಪಟ್ಟಿಗೆ ಸೇರಿಸಿ,  ಮಗು ಅಪಹರಣ ಪ್ರಕರಣದಡಿ ಅವರ ಮೇಲು ದೂರು ದಾಖಲಿಸಿ ಎಂದು ಒತ್ತಾಯಿಸಿದರು. 

       ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ನಾಗರಾಜು ಹೆತ್ತೂರು, ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಮರೀಜೋಸೇಫ್ ಇತರರು ಪಾಲ್ಗೊಂಡಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News