ರಾಜ್ಯದಲ್ಲಿ ಈ ವರ್ಷ ಬರಗಾಲಪೀಡಿತವಾದ ತಾಲೂಕುಗಳೆಷ್ಟು ?

Update: 2016-12-08 14:53 GMT

ಮೂಡಿಗೆರೆ, ಡಿ.8:  ರಾಜ್ಯದಲ್ಲಿ ಕಳೆದ ವರ್ಷ 136 ತಾಲೂಕುಗಳು ಬರಗಾಲ ಪೀಡಿತವಾಗಿದ್ದರೆ, ಪ್ರಸಕ್ತ ವರ್ಷ 139 ತಾಲೂಕುಗಳು ಬರಗಾಲ ಪೀಡಿತ ಪ್ರದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 ಅವರು ಗುರುವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಪರಿವರ್ತಕ ದಿ. ಡಿ.ಎಸ್.ಕೃಷ್ಣಪ್ಪಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದಲೂ ತೀವ್ರ ಬರಗಾಲದ ಪರಿಸ್ಥಿತಿ ತಲೆದೋರಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ಬದ್ದವಾಗಿದೆ. ಈ ವರ್ಷದಲ್ಲಿ ಬಂದಿರುವಂತಹ ಭೀಕರ ಬರಗಾಲವು ಯಾವತ್ತೂ ಬಂದಿಲ್ಲ. ತುಂಗಾ, ಭದ್ರಾ, ನೇತ್ರಾವತಿ ಉಗಮ ಸ್ಥಾನವಾದ ಮಲೆನಾಡಿನ ಮೂಡಿಗೆರೆಯಲ್ಲೂ ಬರಗಾಲವಿದ್ದು, ಈ ತಾಲೂಕನ್ನು ಕೂಡ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಇಷ್ಟೊಂದು ಭೀಕರ ಬರಗಾಲ ಯಾವ ಕಾಲಕ್ಕೂ ಬಂದಿಲ್ಲ ಎಂದು ನುಡಿದರು.

 ಆದರೆ ರೈತರು, ಸಾಮಾನ್ಯ ಜನರು ಆತಂಕ ಪಡುವುದು ಬೇಡ. ಉದ್ಯೋಗದ ಸಮಸ್ಯೆ, ಕುಡಿಯುವ ನೀರು, ಜಾನುವಾರುಗಳಿಗೆ ಎದುರಾಗಿರುವ ಮೇವಿನ ಸಮಸ್ಯೆಗಳನ್ನು ಸರಕಾರ ಎಷ್ಟೇ ಖರ್ಚಾದರೂ ಬದ್ದತೆಯಿಂದ ಪರಿಹರಿಸಲಿದೆ.

ರಾಜ್ಯದಲ್ಲಿ 45 ಸಾವಿರ ಕೋಟಿ ರೂ.ಗಳು ರೈತರ ಮೇಲೆ ಸಾಲವಿದೆ. 35 ಸಾವಿರ ಕೋಟಿ ರೂ.ಗಳು ರಾಷ್ಟ್ರೀಕೃತ ಬ್ಯಾಂಕುಗಳದ್ದಾಗಿದ್ದರೆ, ಉಳಿದ 10 ಸಾವಿರ ಕೋಟಿ ರೂ.ಗಳ ಸಾಲವು ಸಹಕಾರಿ ಸಂಘಗಳಲ್ಲಿದೆ. ಶೇ.20 ರಿಂದ 22ರಷ್ಟು ಸಹಕಾರಿ ಸಂಘದ ಸಾಲವಾದರೆ, ಶೇ. 70 ರಿಂದ 80ರಷ್ಟು ಸಾಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದೆ. ಕೇಂದ್ರ ಸರಕಾರ ಈ ಸಾಲದ ಮೊತ್ತದಲ್ಲಿ ಅರ್ದವನ್ನು ಮನ್ನಾ ಮಾಡಿದರೆ ರಾಜ್ಯ ಸರಕಾರವು ಕೂಡ ಅರ್ಧ ಸಾಲವನ್ನು  ಮನ್ನಾ ಮಾಡಲಿದೆ. ಇದನ್ನು ವಿಧಾನಸಭೆಯ ಚರ್ಚೆಯ ವೇಳೆ ಕೂಡ ಹೇಳಿದ್ದೇನೆ ಎಂದು ನುಡಿದರು.

 ರಾಜ್ಯ ಸರಕಾರವು 3 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದರೆ, ಶೆ.3ರ ಬಡ್ಡಿ ದರದಲ್ಲಿ 3ರಿಂದ 10 ಲಕ್ಷ ರೂ.ಗಳವರೆಗೆ ಸಾಲ ನೀಡುತ್ತದೆ. ರೈತ ಸಮುದಾಯದ ಉಳಿವಿಗಾಗಿ, ಅವರ ರಕ್ಷಣೆಗಾಗಿ ಕಾಂಗ್ರೆಸ್ ಸರಕಾರ ಬದ್ದವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಸ್ಸಾಹಸಕ್ಕೆ ಯಾವುದೇ ಕಾರಣಕ್ಕೂ ಕೈ ಹಾಕಬಾರದು. ಅಂತಾ ಯೋಚನೆ ಮಾಡುವ ಮುನ್ನ ತಮ್ಮ ಕುಟುಂಬ ಪತ್ನಿ, ಮಕ್ಕಳ ಭವಿಷ್ಯದ ಬಗ್ಗೆ ಆಲೋಚಿಸಿ ಆತ್ಮಹತ್ಯೆಯಂತಹ ನಿರ್ಧಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

 ಆತ್ಮಹತ್ಯೆಗೆ ಶರಣಾದ ರೈತ ಕುಟುಂಬವನ್ನು ಮೇಲೆತ್ತಲು ಸರಕಾರ 5 ಲಕ್ಷ ರೂ.ಗಳ ಪರಿಹಾರ ಧನದ ಜತೆಗೆ ಅಂತಹ ರೈತರ ಮಕ್ಕಳ ವಿದ್ಯಾಭಾಸಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಲಿದೆ. ನಮ್ಮ ಸರಕಾರ ರಾಜ್ಯದ ರೈತರ, ಮಹಿಳೆಯರ ಮತ್ತು ಎಲ್ಲಾ ವರ್ಗದ ಜನರ ಪರವಾಗಿ ಪ್ರಾಮಾಣಿಕ ರೀತಿಯಲ್ಲಿ ಧನಾತ್ಮಕ ಕಾರ್ಯ ಯೋಜನೆ ರೂಪಿಸಲು ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News