ರಮೇಶ್ ಆತ್ಮಹತ್ಯೆ ಪ್ರಕರಣ: ಚುರುಕುಗೊಂಡ ತನಿಖೆ
ಮಂಡ್ಯ, ಡಿ.8: ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ ಅವರ ಕಾರು ಚಾಲಕ ಕೆ.ಸಿ.ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ.
ರಮೇಶ್ ಆತ್ಮಹತ್ಯೆಗೆ ಮುನ್ನ ಬರೆದಿಡಲಾಗಿರುವ ಡೆತ್‌ನೋಟ್‌ನಲ್ಲಿನ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಭೀಮಾ ನಾಯ್ಕ ಜನಾರ್ಧನ ರೆಡ್ಡಿ ಪುತ್ರಿ ಮದುವೆಗೆ 100 ಕೋಟಿ ರೂ.ಗಳನ್ನು ವೈಟ್ ಮಾಡಿರುವುದು ಸೇರಿದಂತೆ ಹಲವು ವಿಷಯಗಳು ರಮೇಶ್ ಡೆತ್‌ನೋಟ್‌ನಲ್ಲಿ ಪ್ರಸ್ತಾಪವಾಗಿದ್ದು, ಪ್ರಕರಣ ಗಂಭೀರ ತಿರುವು ಪಡೆದುಕೊಳ್ಳುತ್ತಿದೆ.
ಈಗಾಗಲೇ ಡೆತ್‌ನೋಟ್‌ನಲ್ಲಿನ ಪ್ರಸ್ತಾಪಿತ ವಿಷಯಗಳ ಹಿನ್ನೆಲೆಯಲ್ಲಿ ಭೀಮಾ ನಾಯ್ಕೆ ಮತ್ತು ಅವರ ಕಾರು ಚಾಲಕ ಮುಹಮ್ಮದ್ ವಿರುದ್ಧ ಐಪಿಸಿ ಸೆಕ್ಷನ್ 306 ರಡಿ ಎಫ್‌ಐಆರ್ ದಾಖಲಿಸಿರುವ ಮದ್ದೂರು ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ ಮದ್ದೂರು ಶಿವಪುರ ಕೊಪ್ಪ ಸರ್ಕಲ್‌ನಲ್ಲಿರುವ ಸಮೃದ್ಧ್ ಲಾಡ್ಜ್‌ನ ಸಿಸಿ ಟಿವಿಯಲ್ಲಿ ದಾಖಲಾಗಿರುವ ಮಾಹಿತಿ ಮತ್ತು ಲೆಡ್ಜರ್‌ನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಡಿ.6 ರಂದು ಲಾಡ್ಜ್‌ನಲ್ಲಿ ಮದ್ಯದ ಜತೆ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿರುವ ರಮೇಶ್, ಡಿ.4ರಂದೇ ಲಾಡ್ಜ್ ಕೊಠಡಿ ಬಾಡಿಗೆಗೆ ಪಡೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿಯ ರಮೇಶ್ ಹಲವಾರು ಸ್ನೇಹಿತರ ಒಡನಾಟವಿಟ್ಟುಕೊಂಡಿದ್ದನೆಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನ ಕುಟುಂಬದವರು ಹಾಗೂ ಹಲವು ಗೆಳೆಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಡೆತ್‌ನೋಟ್‌ನಲ್ಲಿ ಪ್ರಸ್ತಾಪಿತವಾಗಿರುವಂತೆ ಭೀಮಾ ನಾಯ್ಕಾ ನೂರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಎಸಿಬಿ ಅಧಿಕಾರಿಗಳೂ ತನಿಖೆಗೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಸ್ತೆ ತಡೆ; ಪರಿಹಾರಕ್ಕೆ ಒತ್ತಾಯ:
ಭೀಮನಾಯ್ಕ ಅವರ ಕಾರಿನ ಚಾಲಕ ರಮೇಶ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹಾಗೂ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮದ್ದೂರಿನ ಪ್ರವಾಸಿಮಂದಿರದ ಎದುರು ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿದರು.
ಭೀಮಾ ನಾಯ್ಕ ಅವರ ನೂರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ವಿಚಾರ ರಮೇಶ್ ಅವರಿಗೆ ತಿಳಿದಿರುವ ಹಿನ್ನೆಲೆಯಲ್ಲಿ ಪ್ರಾಣ ಬೆದರಿಕೆ ಹಾಕಿದ್ದು, ರಮೇಶ್ ಆತ್ಮಹತ್ಯೆಗೆ ಕಾರಣವಾಗಿದೆ. ಕೂಡಲೇ ಡೆತ್‌ನೋಟ್‌ನಲ್ಲಿನ ಪ್ರಸ್ತಾಪಿತ ವಿಷಯಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸಬೇಕು. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ದೇವರಾಜು, ಜಗದೀಶ್, ಸಾಗರ್, ಯಾಕೂಬ್, ಗುಂಡಮಹೇಶ್, ಮಲ್ಲರಾಜು, ಯೋಗೇಶ್‌ಗೌಡ, ಮಹಾಲಿಂಗು, ರವಿ, ರಮೇಶ್, ನದೀಮ್, ಕುಮಾರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.