×
Ad

ಕೊಡಗು ಜಿಲ್ಲಾ ಪಿಡಬ್ಲೂಡಿ ಇಂಜಿನಿಯರ್ ಎಸಿಬಿ ಬಲೆಗೆ

Update: 2016-12-08 23:24 IST

ಮಡಿಕೇರಿ, ಡಿ.8 : ವಸತಿಗೃಹ ದುರಸ್ತಿ ಕಾಮಗಾರಿಯ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಂದ 80 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾಯಪಾರ್ಲಕ ಅಭಿಯಂತರ ಜಗನ್ನಾಥ ಜಾದವ್ ಎಂಬವರು ತಮ್ಮ ಮನೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಲೋಕೋಪಯೋಗಿ ಇಲಾಖಾ ಕಾರ್ಯಪಾಲಕ ಅಭಿಯಂತರ ಜಗನ್ನಾಥ ಜಾದವ್ ಅವರಿಗೆ ಬೆಳಗ್ಗೆ ನಗರದ ಸುದರ್ಶನ ವೃತ್ತದ ಬಳಿಯ ಅವರ ವಸತಿಗೃಹದಲ್ಲೇ ಕ್ಲಾಸ್ ಒನ್ ಲೋಕೋಪಯೋಗಿ ಗುತ್ತಿಗೆದಾರ ಯತೀಶ್, ಲಂಚದ ಹಣ ನೀಡುವ ಸಂದರ್ಭ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಸಾಕ್ಷ್ಯ ಅವರನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು.


ನಗರದ ನ್ಯೂಎಕ್ಸ್‌ಟೆನ್ಶನ್ ನಿವಾಸಿ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ಯತೀಶ್ ಅವರು ವಾರ್ತಾ ಇಲಾಖೆಯ ಸಮೀಪ ಪಿಡಬ್ಲ್ಯುಡಿಯ ಆರು ವಸತಿ ಗೃಹಗಳ ದುರಸ್ತಿಯ 23 ಲಕ್ಷ ರೂ. ಮೊ್ತದ ಟೆಂಡರ್‌ನ್ನು ಪಡೆದುಕೊಂಡಿದ್ದರು. ಕಾಮಗಾರಿಯ ಕರಾರಿಗಾಗಿ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಜಗನ್ನಾಥ್ ಯಾದವ್ 4 ಲಕ್ಷ ರೂ. ನೀಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದರು. ಅಲ್ಲದೆ, ಈ ಹಣಕ್ಕಾಗಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದರು ಎಂದು ಯತೀಶ್ ಆರೋಪಿಸಿದ್ದಾರೆ.


ಗುತ್ತಿಗೆದಾರನಿಂದ ಎಸಿಬಿಗೆ ದೂರು
ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರು ಲಂಚಕ್ಕಾಗಿ ಬೇಡಿಕೆ ಮುಂದಿಟ್ಟಿರುವ ಬಗ್ಗೆ ಯತೀಶ್ ಮೈಸೂರು ಎಸಿಬಿಗೆ ಬುಧವಾರ ಸಂಜೆ ದೂರನ್ನು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಮೈಸೂರು ಎಸಿಬಿ ಎಸ್ಪಿ ಕವಿತಾ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿನಯ್, ಇನ್‌ಸ್ಪೆಕ್ಟರ್‌ಗಳಾದ ಗಂಗಾಧರ, ಅನಿಲ್  ುಮಾರ್ ಮತ್ತು ಸಿಬ್ಬಂದಿ ಗುರುವಾರ ಬೆಳಗ್ಗೆ 8:45ರ ಸುಮಾರಿಗೆ ದಾಳಿ ನಡೆಸಿದರು. ಗುತ್ತಿಗೆದಾರ ಯತೀಶ್ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಒಳಗೊಂಡ 80 ಸಾವಿರ ರೂ. ಕಾರ್ಯಪಾಲಕ ಅಭಿಯಂತರ ಜಗನ್ನಾಥ್ ಜಾದವ್ ಅವರಿಗೆ ಅವರ ಮನೆಯಲ್ಲೇ ನೀಡುತ್ತಿದ್ದ ವೇಳೆ ಅವರನ್ನು ತಮ್ಮ ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಕಾರ್ಯಾಚರಣೆೆಯಲ್ಲಿ ಪಾಲ್ಗೊಂಡಿದ್ದ ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಅಧಿಕಾರಿಯನ್ನು ಮೈಸೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News