ರಾಜ್ಯದ ಬರ ಪರಿಸ್ಥಿತಿ
ಶಿವಮೊಗ್ಗ, ಡಿ. 8: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ನಿಭಾಯಿಸಲು 4,700 ಕೋಟಿ ರೂ. ಪರಿಹಾರ ಧನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2,000 ಕೋಟಿ ರೂ. ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರದಿಂದ ಹಣ ಬಿಡುಗಡೆಯಾಗುತ್ತಿದ್ದಂತೆಯೇ ರೈತರಿಗೆ ಬೆಳೆ ಪರಿಹಾರವನ್ನು ಬ್ಯಾಂಕ್ ಖಾತೆಗಳ ಮೂಲಕ ವಿತರಿಸಲಾಗುವುದು ಎಂದರು.
2 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಮಳೆ ವಾಡಿಕೆಗಿಂತ ಕಡಿಮೆ ಆಗಿರುವುದರಿಂದ ಸಾಕಷ್ಟು ಸಮಸ್ಯೆ ಉಲ್ಬಣವಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೆಲಸ ನಿರ್ವಹಣೆಯಲ್ಲಿ ಅಸಡ್ಡೆ ತೋರಬಾರದು. ಜವಾಬ್ಧಾರಿಯುತವಾಗಿ ಕೆಲಸ ನಿರ್ವಹಣೆ ಮಾಡಬೇಕೆಂದು ತಾಕೀತು ಮಾಡಿದರು.
ಮುಂದಿನ ಮಳೆಗಾಲ ಆರಂಭವಾಗುವ ವರೆಗೆ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊ ಸೂಚನೆ ನೀಡಿದರು. ಸಾಧ್ಯವಾದಷ್ಟು ಈಗಿರುವ ಮೇವನ್ನು ಶೇಖರಣೆ ಮಾಡಿ. ಬೇರೆ ಜಿಲ್ಲೆಗಳಿಗೆ ಬೇಡಿಕೆ ಬಂದರೆ ಇಲ್ಲಿನ ಹೆಚ್ಚಿನ ಮೇವನ್ನು ಕಳುಹಿಸಿಕೊಡಬೇಕು.
ಈ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ಹಾಗೂ ಕೃಷಿ ಇಲಾಖೆ ಗಮನಹರಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಲೋಕೇಶ್, ಜಿ.ಪಂ. ಸಿಇಒ ರಾಕೇಶ್ ಕುಮಾರ್, ಎಡಿಸಿ ಚನ್ನಬಸಪ್ಪ, ಉಪವಿಬಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಸತ್ಯನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ಅರಣ್ಯ ವಾಸಿಗಳಿಗೆ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿಯೇ ಈ ರೀತಿಯಾದರೆ ಬೇರೆ ಜಿಲ್ಲೆಗಳಲ್ಲಿ ಪರಿಸ್ಥಿತಿ ಏನಾಗಿರಬೇಡ. ಡಿಸೆಂಬರ್ ಅಂತ್ಯದೊಳಗೆ ಹಕ್ಕುಪತ್ರ ನೀಡುತ್ತೇನೆ ಎಂದು ಹೇಳಿದ್ದೆ. ಮುಂದಿನ ಮಾರ್ಚ್ ಒಳಗಾದರೂ ಈ ಬಗ್ಗೆ ಒಂದು ಅಂತಿಮ ರೂಪವನ್ನು ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಸಚಿವ ಕಾಗೋಡು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.