ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಕಿರುಕುಳ: ಆರೋಪ
ಸೊರಬ, ಡಿ.8: ಸ್ವಸಹಾಯ ಸಂಘಗಳಿಂದ ಪಡೆದ ಸಾಲವನ್ನು ಮರು ಪಾವತಿಸುವಂತೆ ಮಹಿಳಾ ಸ್ವ-ಸಹಾಯ ಸಂಘವು ಕಾಲಾವಕಾಶ ನೀಡದೆ ಒತ್ತಡ ಹಾಕುತ್ತಿದ್ದು, ಇವರಿಂದಾಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿ ಪಟ್ಟಣದ ವಿವಿಧ ಬಡಾವಣೆಯ ನೂರಾರು ಮಹಿಳೆಯರು ಗುರುವಾರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಾನಕೇರಿ ಬಡಾವಣೆಯ ರತ್ನಮ್ಮ ಮಾತನಾಡಿ,500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳು ರದ್ದು ಮಾಡಿದ ಪರಿಣಾಮ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ,ಹೀಗಿರುವಾಗ ನಾವು ಸಾಲ ಎಲ್ಲಿಂದ ಕಟ್ಟಲು ಸಾಧ್ಯ.ಸ್ವಸಹಾಯ ಸಂಘದವರಿಗೆ ಸಾಲ ತೀರಿಸಲು ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರೂ ಕೇಳುತ್ತಿಲ್ಲ. ಪ್ರತಿ ನಿತ್ಯ ಮನೆಗೆ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಝಮ್ಷೀದಾ ಬೇಗಂ ಮಾತನಾಡಿ, ಹತ್ತಾರು ವರ್ಷಗಳಿಂದ ಸಂಘಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡಿದ್ದೇವೆ. ತಾಲೂಕಿನಲ್ಲಿ ಸತತ ಎರಡು ವರ್ಷಗಳಿಂದ ಬರ ಎದುರಾಗಿದ್ದು, ಇದರಿಂದ ಸಂಘಗಳಿಂದ ಪಡೆದ ಸಾಲವನ್ನು ತೀರಿಸಲಾಗದ ಸ್ಥಿತಿಯಲ್ಲಿದ್ದೇವೆ. ಬಡತನದಲ್ಲಿ ನರಳಾಡುತ್ತಿರುವ ನೂರಾರು ಬಡ ಕುಟುಂಬಗಳು ಮನೆ ಕಟ್ಟಲು ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದಿರುವುದು ನಿಜ. ಆದರೆ ರೂ. 500 ಹಾಗೂ 1000 ನೋಟು ರದ್ದು ಆಗಿರುವುದರಿಂದ ನಮ್ಮ ಹಳೆ ನೋಟುಗಳನ್ನು ಚಲಾವಣೆ ಮಾಡಲು ವಾರಗಟ್ಟಲೆ ಬ್ಯಾಂಕುಗಳಲ್ಲಿ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದ ಅವರು, ವಾರಕ್ಕೆ 3 ಸಾವಿರಗಿಂತಲೂ ಹೆಚ್ಚು ಸಾಲದ ಕಂತು ತೀರಿಸಬೇಕಾಗಿದೆ.
ಮಹಿಳೆಯರು ಮಾಡಿದ ಹಾರಗಳನ್ನು ಅರ್ಧ ಬೆಲೆಗೆ ಕೇಳುತ್ತಿದ್ದಾರೆ, ಇಂತಹ ಅನೇಕ ಸಮಸ್ಯೆಗಳ ನಡುವೆ ಸ್ವಸಹಾಯ ಸಂಘದವರು ಮನೆ ಬಾಗಿಲಿಗೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಡವರಾದ ನಮ್ಮ ರಕ್ಷಣೆಗೆ ಸರಕಾರ ಮುಂದಾಗಬೇಕು ಹಾಗೂ ಸಂಘಗಳಿಂದ ಪಡೆದ ಸಾಲವನ್ನು ಮನ್ನಾಮಾಡಬೇಕು ಎಂದು ಒತ್ತಾಯಿಸಿದರು. ಸುಮಿತ್ರಮ್ಮ,ಪರವೀನಾ, ಶಾಹೀನಾ ಬೇಗಂ,ನೇತ್ರಾವತಿ, ಅಬುದಾಬಿ, ಸಲ್ಮಾ, ಕುಂಬಾರ ರತ್ನಮ್ಮ ಶಾರದಾ,ಲತಾ,ಕುಸುಮಾ, ನಸೀಮಾ ಭಾನು, ಮತ್ತಿತರರು ಭಾಗವಹಿಸಿದ್ದರು.