ವಿಶ್ವವನ್ನೇ ಕಾಡುತ್ತಿರುವ ಏಡ್ಸ್ ಬಗ್ಗೆ ಜಾಗೃತರಾಗಬೇಕಾಗಿದೆ’
ಶಿವಮೊಗ್ಗ, ಡಿ.8: ಜಗತ್ತಿಗೇ ಇಂದು ಮಾರಕವಾಗಿ ಕಾಡುತ್ತಿರುವ ಏಡ್ಸ್‌ನಿಂದ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಎಫ್ ಪಿಎಐ ರಾಷ್ಟ್ರೀಯ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ ಕರೆ ನೀಡಿದರು.
ಕಸ್ತೂರ್ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಎಫ್‌ಪಿಎಐ ಶಿವಮೊಗ್ಗ ಶಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕಸ್ತೂರ್ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸೋಂಕಿತ ವ್ಯಕ್ತಿಯು ಬಳಸಿದ,ಸಂಸ್ಕರಿಸದ ಸೂಜಿ ನಮ್ಮ ದೇಹದಲ್ಲಿ ಹೊಕ್ಕರೆ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಪರೀಕ್ಷಿಸದ ರಕ್ತವನ್ನು ಬಳಸುವುದರಿಂದ ಮತ್ತು ಸೋಂಕಿತ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಅಪಾಯ ಇರುತ್ತದೆ ಎಂದರು.
ಎಚ್‌ಐವಿ ದೇಹದಲ್ಲಿ ಇದೆಯೋ ಇಲ್ಲವೋ ಎಂದು ತಿಳಿಯಲು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿರುವ ಐಸಿಟಿಸಿ ಕೇಂದ್ರಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಮಾಡಿಸಬಹುದು. ಇಲ್ಲಿ ಕೌನ್ಸಿಲಿಂಗ್ ವ್ಯವಸ್ಥೆಯೂ ಇರುತ್ತದೆ. ಮತ್ತು ಇಲ್ಲಿ ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿ ಕಾಪಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ದಿನೇಶ್ ಮಾತನಾಡಿ, ಎಚ್‌ಐವಿಯೊಂದಿಗೆ ಬದುಕುತ್ತಿರುವವರಲ್ಲಿ ಶೇ.31 ರಷ್ಟು ಜನ 15 ರಿಂದ 29 ವಯಸ್ಸಿನ ಯುವಜನರಾಗಿದ್ದಾರೆ. 2002ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 7659 ಏಡ್ಸ್ ರೋಗಿಗಳನ್ನು ಪತ್ತೆ ಮಾಡಲಾಗಿದೆ. 6 ತಿಂಗಳ ಅವಧಿಯಲ್ಲಿ 193 ಮಂದಿ ಏಡ್ಸ್ ಸೋಂಕಿಗೆ ಒಳಗಾಗಿದ್ದು, ಅವರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು,ಈ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಮತ್ತು ಆಯ್ದ ಕೇಂದ್ರಗಳಲ್ಲಿ ಸಮಾಲೋಚನೆಗೆ ಅವಕಾಶ ಕಲ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಪಿಎಐ ಅಧ್ಯಕ್ಷ ಎಚ್.ಬಿ. ರಮೇಶ್ ಬಾಬು, ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ದೀಪಾ ಚಂದ್ರನ್, ಹಿರಿಯ ಆರೋಗ್ಯ ಮೇಲ್ವಿಚಾರಕ ವೆಂಕಟಕೃಷ್ಣಯ್ಯ, ಪ್ರಾಂಶುಪಾಲ ಪಜುಲ್ಲಾ ಖಾನ್ ಮತ್ತಿತತರು ಉಪಸ್ಥಿತರಿದ್ದರು.