ರಾಷ್ಟ್ರ ಮಟ್ಟದ ಥ್ರೋಬಾಲ್ ಸ್ಪರ್ಧೆ ಆಗುಂಬೆ ಪ್ರೌಢಶಾಲೆಯ ತಂಡಗಳು ಆಯ್ಕೆ
ತೀರ್ಥಹಳ್ಳಿ, ಡಿ.8: ಪ್ರತಿಷ್ಠಿತ ಮಣಿಪಾಲ್ ಸಮೂಹ ಸಂಸ್ಥೆಯವರ ತಾಲೂಕಿನ ಆಗುಂಬೆಯ ಎವಿಎಂ ಪ್ರೌಢಶಾಲೆಯ ಬಾಲಕ-ಬಾಲಕಿಯರ ತಂಡವು ರಾಷ್ಟ್ರ ಮಟ್ಟದ ಥ್ರೋಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಭಟ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಆಗುಂಬೆ ಎವಿಎಂ ಪ್ರೌಢಶಾಲೆಯ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ ಜಯಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಎವಿಎಂ ಪ್ರೌಢಶಾಲೆಯ ಬಾಲಕಿಯರ ತಂಡವು ಫೈನಲ್‌ನಲ್ಲಿ ಜಯ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು, ಜಿಲ್ಲಾಮಟ್ಟ, ವಿಭಾಗಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈ ಶಾಲೆಯ ಬಾಲಕರ ತಂಡದಲ್ಲಿ ಪ್ರತೀಕ್ ಎಸ್.ಎಸ್., ಶ್ರೀನಾಗ ಆರ್., ಶ್ರೇಯಸ್ ಕೆ.ಯು. ಮತ್ತಿತರರು ಭಾಗವಹಿಸಿದ್ದರು. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈ ಎರಡೂ ತಂಡಗಳಿಗೆ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಹಾಗೂ ಶಾಲಾ ಮಂಡಳಿ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.