×
Ad

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಗೋಲ್‌ಮಾಲ್ ಪ್ರಕರಣ : ಏಳು ನಿರ್ದೇಶಕರು ವಜಾ

Update: 2016-12-09 20:29 IST

ಶಿವಮೊಗ್ಗ, ಡಿ. 9: ರಾಜ್ಯಾದ್ಯಂತ ಸುದ್ದಿಯಾಗಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದ 62 ಕೋಟಿ ರೂ. ಗೋಲ್‌ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಸೇರಿದಂತೆ ಏಳು ಮಂದಿಯನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಸಹಕಾರಿ ಇಲಾಖೆ ಆದೇಶ ಹೊರಡಿಸಿದೆ.

ಇದು ಸಹಕಾರಿ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಆರ್.ಎಂ. ಮಂಜುನಾಥಗೌಡ ಜೊತೆಗೆ ಎಂ.ಬಿ. ಚೆನ್ನವೀರಗೌಡ, ಅಗಡಿ ಅಶೋಕ್, ಎಚ್.ಎನ್. ವಿಜಯದೇವ್, ದುಗ್ಗಪ್ಪಗೌಡ, ಜೆ.ಸಿ. ಯೋಗೇಶ್ ಹಾಗೂ ಎಚ್.ಕೆ.ಎಸ್.ವೆಂಕಟಗಿರಿರಾವ್ ಅವರ ಸದಸ್ಯತ್ವವನ್ನು ಸಹಕಾರಿ ಇಲಾಖೆಯು ರದ್ದುಪಡಿಸಿದೆ. ಇದರ ಜೊತೆಗೆ ಮುಂದಿನ ಏಳು ವರ್ಷಗಳ ಕಾಲ ಸಹಕಾರ ಕ್ಷೇತ್ರದ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಕೂಡ ಹೇರಿದೆ.

ಅಲ್ಲದೆ, ಹಗರಣದ ಬಗ್ಗೆ ತನಿಖೆ ನಡೆಸಿ ಫೆ.29 ರಂದು ಸರಕಾರ ಹೊರಡಿಸಿದ್ದ ಆದೇಶಕ್ಕೆ ಮಾನ್ಯತೆ ನೀಡದ ಡಿಸಿಸಿ ಬ್ಯಾಂಕ್ ಬಗ್ಗೆಯೂ ಸಹಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಲನೆಯಾಗದ ಆದೇಶ?

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಕಲಿ ಚಿನ್ನಾರಣ ಅಡಮಾನ ಸೇರಿದಂತೆ ನಾನಾ ವಿಭಾಗಗಳಲ್ಲಿ 62 ಕೋಟಿ ರೂ. ಮೊತ್ತದ ಭಾರೀ ಅವ್ಯವಹಾರ ನಡೆದಿತ್ತು. ಈ ಕುರಿತಂತೆ ಸಹಕಾರಿ ಇಲಾಖೆಯು ಸಹಕಾರ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಆರ್.ಎಂ. ಮಂಜುನಾಥಗೌಡ ಮತ್ತು ಬ್ಯಾಂಕ್‌ನ ಹಾಲಿ ಹಾಗೂ ಮಾಜಿ ನಿರ್ದೇಶಕರ ವಿರುದ್ಧ ಸಿವಿಲ್ - ಕ್ರಿಮಿನಲ್ ಕೇಸ್ ದಾಖಲಿಸಲು ಶಿಪಾರಸ್ಸು ಮಾಡಿದ್ದರು. ಅಲ್ಲದೆ, ಅವ್ಯವಹಾರದಿಂದ ಬ್ಯಾಂಕ್‌ಗೆ ಆಗಿರುವ ನಷ್ಟವನ್ನು ಆಪಾದಿತರಿಂದ ವಸೂಲಿ ಮಾಡಬೇಕು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರು ವರದಿಯಲ್ಲಿ ತಿಳಿಸಿದ್ದರು.

ಸದಸ್ಯತ್ವ ರದ್ದು:

ತಪ್ಪಿತಸ್ಥರ ವಿರುದ್ಧ 45 ದಿನಗಳೊಳಗೆ ಕ್ರಮಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ನೀಡಿದ್ದ ನಿರ್ದೇಶನ ಪಾಲನೆಯಾಗದಿರುವುದಕ್ಕೆ ಡಿಸಿಸಿ ಬ್ಯಾಂಕ್ ವಿರುದ್ಧ ಸಹಕಾರಿ ಇಲಾಖೆಯ ಜಂಟಿ ನಿಬಂಧಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ.23 ರಂದು 108 ಪುಟದ ಮತ್ತೊಂದು ಆದೇಶ ಹೊರಡಿಸಿ, ಏಳು ಜನ ನಿರ್ದೇಶಕರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆದೇಶಿಸಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ನಗರ ಶಾಖೆಯಲ್ಲಿ ನಕಲಿ ಬಂಗಾರ ಅಡಮಾನವಿಡುವುದು ಸೇರಿದಂತೆ ಹಲವು ರೀತಿಯಲ್ಲಿ ಸುಮಾರು 62ಕೋಟಿ ರೂ. ವಂಚನೆಯಾಗಿತ್ತು. ಮೊದಲು ಕೆಲವು ಲಕ್ಷ ರೂ. ವಂಚನೆಯಾಗಿರುವ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು.

ಅಂದಿನ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಅವರು, ಪ್ರಕರಣವನ್ನು ಆಳವಾಗಿ ತನಿಖೆ ನಡೆಸುವ ಸಲುವಾಗಿ ತನ್ನ ನಿರ್ದೇಶನದಲ್ಲಿ ವಿಶೇಷ ಪೊಲೀಸ್ ತನಿಖಾ ತಂಡ ರಚನೆ ಮಾಡಿದ್ದರು. ಈ ತಂಡವು ನಗರ ಶಾಖೆಯ ಬ್ಯಾಂಕ್ ಮ್ಯಾನೇಜರ್ ಶೋಭಾ ಸೇರಿದಂತೆ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥಗೌಡ, ಮಹಾ ಪ್ರಬಂಧಕ ನಾಗಭೂಷಣ್ ಇತರ ನೌಕರರು, ರೌಡಿ ಶೀಟರ್‌ಗಳು ಸೇರಿದಂತೆ ಸುಮಾರು 18 ಜನರನ್ನು ಬಂಧಿಸಿ ಜೈಲ್‌ಗೆ ಕಳುಹಿಸಿತ್ತು.

ಬಳಿಕ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು.  ಸಿಐಡಿ, ಆರ್.ಎಂ.ಮಂಜುನಾಥಗೌಡ ಮೊದಲಾದವರನ್ನು ಆರೋಪ ಮುಕ್ತಗೊಳಿಸಿತ್ತು. ಈ ಪ್ರಕರಣವು ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ನಗರ ಶಾಖೆಯಲ್ಲಿ ಬೆಳಕಿಗೆ ಬಂದ ಗೋಲ್‌ಮಾಲ್‌ನ ಬಳಿಕ ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಸಹಕಾರಿ ಇಲಾಖೆಯು ಪರಿಶೀಲನೆಗೊಳಪಡಿಸಿತ್ತು. 

ಸಭೆಯೇ ಸೇರದ ವಂಚನಾ ನಿಗಾ ಸಮಿತಿ:

ಡಿಸಿಸಿ ಬ್ಯಾಂಕ್‌ಗಳಲ್ಲಿ ಅಕ್ರಮ ತಡೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಂಚನಾ ನಿಗಾ ಸಮಿತಿ ಮತ್ತು ಅಪಾಯ ನಿಗಾ ಸಮಿತಿ ರಚನೆ ಮಾಡಲಾಗಿತ್ತು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಬೆಳಕಿಗೆ ಬರುವವರೆಗೂ ಈ ಸಮಿತಿಗಳು ಒಮ್ಮೆಯೂ ಸಭೆ ಸೇರದಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ವೈಫಲ್ಯದ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

 ಜಂಟಿ ನಿಬಂಧಕ ತನಿಖಾ ಸಮಿತಿಯ ಸೂಚನೆ

ಹಗರಣದಲ್ಲಿ ಭಾಗಿಯಾದ ಹಾಲಿ, ಮಾಜಿ ನಿರ್ದೇಶಕರು ಹಾಗೂ ಬ್ಯಾಂಕ್ ನೌಕರರಿಂದ ದುರುಪಯೋಗವಾದ ಮೊತ್ತ ವಸೂಲಿ ಮಾಡಬೇಕು. ಸಹಕಾರಿ ಕಾಯ್ದೆ 69/70 ರಡಿ ಪ್ರಕರಣ ದಾಖಲಿಸಿ, 15 ದಿನದಲ್ಲಿ ಅನುಸರಣಾ ವರದಿ ಸಲ್ಲಿಸಬೇಕು. ಬಡ್ಡಿ ಬಾಬ್ತು ನಷ್ಟ, ಬೇಕಾಬಿಟ್ಟಿಯಾಗಿ ಸಾಲ ನೀಡಿಕೆ, ಸಾಲ ನೀಡಿಕೆಯಲ್ಲಿ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕಲಂ 69/70 ರ ಅಡಿ ಪ್ರಕರಣ ದಾಖಲಿಸಿ ಬ್ಯಾಂಕ್‌ಗೆ ಆಗಿರುವ ನಷ್ಟ ವಸೂಲಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News