ಹಾಡ್ಲಹಳ್ಳಿ ನಾಗರಾಜ್ ಬದುಕು - ಬರಹ ಕುರಿತು ಸಂವಾದ : ಪುಸ್ತಕ ಬಿಡುಗಡೆ

Update: 2016-12-10 16:29 GMT

ಸಕಲೇಶಪುರ,ಡಿ.10: ಪಟ್ಟಣದ ತಾಪಂ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಡಿ.12 ರಂದು ಹಾಡ್ಲಹಳ್ಳಿ ನಾಗರಾಜ್ ಬದುಕು-ಬರಹ ಕುರಿತ ಸಂವಾದ ಹಾಗೂ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಆಯೋಜನೆಗೊಂಡಿದೆ ಎಂದು ಹೆತ್ತೂರು ದೇವರಾಜ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಮಲೆನಾಡಿನ ನೈಜ ಬದುಕಿನ ಚಿತ್ರಣವನ್ನು ತಮ್ಮ ಬರಹಗಳ ಮೂಲಕ ಯಥಾವತ್ತಾಗಿ ಚಿತ್ರಿಸುವ ಪ್ರತಿಭಾವಂತರಾಗಿರುವ ಹಾಡ್ಲಹಳ್ಳಿ ನಾಗರಾಜ್ ಅವರ ಬದುಕು ಮತ್ತು ಬರಹಗಳ ನಡುವೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಇವರ ಸಾಹಿತ್ಯ ಹಾಗೂ ಚಿಂತನೆಗಳ ಬಗ್ಗೆ ಆಸಕ್ತರಿಗೆ ಮುಟ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದರು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ರಕ್ಷಿದಿ ಪ್ರಸಾದ್ ಮಾತನಾಡಿ, ಮಲೆನಾಡಿನ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಾಗರಾಜ್ ಅವಗಣನೆಗೆ ಒಳಗಾಗಿದ್ದಾರೆ. ಕೊಡಗು ಜಿಲ್ಲೆಗಳಲ್ಲಿ ಎಲ್ಲರ ಪರಿಚಯದ ಸಾಹಿತಿಯಾಗಿದ್ದರೂ ಮೂಲ ಸ್ಥಾನದಲ್ಲಿ ಮಾತ್ರ ಅವರ ಬಗ್ಗೆ ಮಾತನಾಡುವ ಮನಸ್ಸುಗಳ ಕೊರತೆ ಇರುವುದು ಬೇಸರದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ವಿಚಾರವಂತ, ಲೇಖಕ, ಅದ್ಭುತ ಕತೆಗಾರನಾದ ಹಾಡ್ಲಹಳ್ಳಿ ನಾಗರಾಜ್ ಅವರ ವಿಚಾರಗಳನ್ನು ಜನರ ನಡುವೆ ತರುವ ಪ್ರಯತ್ನವೇ ಈ ಕಾರ್ಯಕ್ರಮವಾಗಿದೆ ಎಂದರು.

ಸೈಂಟ್ ಆಗ್ನೇಸ್ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ವೇಣುಗೋಪಾಲ್ ಮಾತನಾಡಿ, ಎಲ್ಲೊಂದು ಇಲ್ಲೊಂದು ವಿಚಾರಗಳನ್ನು ಸಂಗ್ರಹ ಮಾಡಿ ಬೆರಳೆಣಿಕೆಯ ಲೇಖನಗಳನ್ನು ಬರೆದವರೆಲ್ಲಾ ದೊಡ್ಡ ಸಾಹಿತಿಗಳು, ಬರಹಗಾರರು ಎಂದು ಬಿಂಬಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಮಲೆನಾಡಿನ ನಿಜವಾದ ಸಾಹಿತಿಯ ಬಗ್ಗೆ ಮಾತನಾಡದಿದ್ದರೆ ತಪ್ಪಾಗುತ್ತದೆ. ಈ ಸಾಲಿನಲ್ಲಿ ಪ್ರಮುಖರಾಗಿ ಕಾಣಸಿಗುವ ಹಾಡ್ಲಹಳ್ಳಿ ನಾಗರಾಜ್ ಅವರನ್ನು ಗುರುತಿಸದಿದ್ದರೆ ನಮಗೆ ನಾವೇ ನಾಚಿಕೆ ಪಟ್ಟುಕೊಳ್ಳಬೇಕಾಗುತ್ತದೆ. ಇವರ ವಿಚಾರ ಧಾರೆಗಳನ್ನು ಯುವ ಸಾಹಿತಿಗಳು ಹೆಚ್ಚು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.

ಸಮಾರಂಭದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ಸಾಹಿತಿ ಆರ್.ಪಿ.ವೆಂಕಟೇಶಮೂರ್ತಿ ಉದ್ಘಾಟಿಸಲಿದ್ದಾರೆ. ಹಾಡ್ಲಹಳ್ಳಿ ನಾಗರಾಜ್ ಅವರ ಮೂರು ಕೃತಿಗಳನ್ನು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಚಲನಚಿತ್ರ ನಿರ್ದೇಶಕ ರವೀಂದ್ರನಾಥ್, ನಿರಂತರ ಪ್ರಕಾಶನದ ಪ್ರವೀಣ್ ಜಗಾಟ, ಚಲಂ ಹಾಡ್ಲಹಳ್ಳಿ ಪಾಲ್ಗೊಳ್ಳಲಿದ್ದಾರೆ. ನಂತರ ವಿಚಾರಗೋಷ್ಟಿ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News