ರಾಜ್ಯದಲ್ಲಿ ಐಟಿ ದಾಳಿ: ಮನೆಯ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ 5.70 ಕೋಟಿ ರೂ.ಮೊತ್ತದ ಹೊಸನೋಟು, 32 ಕೆಜಿ ಚಿನ್ನ ಪತ್ತೆ
ಬೆಂಗಳೂರು, ಡಿ. 10: ಹವಾಲಾ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಹುಬ್ಬಳ್ಳಿ, ಚಿತ್ರದುರ್ಗ, ಗೋವಾ ಸೇರಿ 15ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಆದಾಯ ತೆರಿಗೆ(ಐಟಿ)ಅಧಿಕಾರಿಗಳು ಶೌಚಾಲಯದ ಮೂಲಕ ಪ್ರವೇಶವಿದ್ದ ಗುಪ್ತ ಕೊಠಡಿಯಲ್ಲಿ 5.70 ಕೋಟಿ ರೂ. ಮೊತ್ತದ 2 ಸಾವಿರ ಮುಖಬೆಲೆಯ ನೋಟುಗಳು ಹಾಗೂ 32 ಕೆಜಿ ಚಿನ್ನ-ಬೆಳ್ಳಿ ಆಭರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ ಮತ್ತು ಕರ್ನಾಟಕ ರಾಜ್ಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜಂಟಿಯಾಗಿ ಮೇಲ್ಕಂಡ ದಾಳಿ ನಡೆಸಿದ್ದು, ನೂರು ರೂ. ಮತ್ತು 20 ರೂ. ಮುಖಬೆಲೆಯ 90 ಲಕ್ಷ ರೂ.ನಗದನ್ನು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಸಣ್ಣ ಪಟ್ಟಣದಲ್ಲಿ ದೊಡ್ಡ ಮೊತ್ತ: ಚಳ್ಳಕೆರೆ ನಗರದ ಹೊಸಮನೆ ಬಡಾವಣೆಯ ನಿವಾಸಿ ಜೆಡಿಎಸ್‌ನ ಯುವ ಮುಖಂಡ, ಉದ್ಯಮಿ ಕೆ.ಸಿ.ವಿರೇಂದ್ರ(ಪಪ್ಪಿ) ಹಾಗೂ ಆತನ ಸಹೋದರರಾದ ಕೆ.ಸಿ.ನಾಗರಾಜ್. ಕೆ.ಸಿ.ಸ್ವಾಮಿ, ಹುಬ್ಬಳ್ಳಿಯ ಸಮುಂದರ್ ಸಿಂಗ್ ಅವರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೆ ಮೊಟ್ಟ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಚಳ್ಳಕೆರೆಯಂತಹ ಸಣ್ಣ ಪಟ್ಟಣದಲ್ಲಿ 5.70 ಕೋಟಿ ರೂ.ಮೊತ್ತದ 2 ಸಾವಿರ ಮುಖಬೆಲೆಯ ಹೊಸ ನೋಟುಗಳು, 90ಲಕ್ಷ ರೂ.ನೂರು ರೂ.ಮತ್ತು 20 ರೂ.ಮುಖಬೆಲೆ ನೋಟುಗಳು ಹಾಗೂ 4 ಕೆ.ಜಿ.ಚಿನ್ನಾಭರಣ, 28 ಕೆ.ಜಿ.ಯಷ್ಟು ಚಿನ್ನದ ಗಟ್ಟಿಗಳು ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.
ಕೆ.ಸಿ.ವೀರೇಂದ್ರ ಸಿನಿಮಾ ನಟ ದೊಡ್ಡ ಅವರ ಅಳಿಯ ಎಂದು ಹೇಳಲಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಗೊತ್ತಾಗಿದೆ. ಈತ ಗೋವಾದಲ್ಲಿನ ಕ್ಯಾಸಿನೋ (ಜೂಜು) ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ತೊಡಗಿದ್ದಾನೆ ಎಂದು ಹೇಳಲಾಗಿದೆ.