ಹಾಸನ: ಕಸದ ರಾಶಿಗೆ ರದ್ದಾದ ನೋಟುಗಳ ಎಸೆದು ಬೆಂಕಿ
ಹಾಸನ, ಡಿ.10: ಹಳೆ ನೋಟುಗಳನ್ನು ಕಸದ ರಾಶಿಗೆ ಸುರಿದು ನಂತರ ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ನಗರದ ಸಂತೇಪೇಟೆ ವೃತ್ತದ ಬಳಿ ಇರುವ ಬಿ.ಎಂ. ರಸ್ತೆ ಹತ್ತಿರ ಬೆಳಗ್ಗೆ ಅಪರಿಚಿತರು ಬ್ಯಾಗ್‌ನಲ್ಲಿ 500, 1,000 ರೂ. ಮುಖಬೆಲೆಯ ನೋಟುಗಳನ್ನು ಕಸದ ತೊಟ್ಟಿಗೆ ಸುರಿದು, ನಂತರ ನೋಟುಗಳಿಗೆ ಬೆಂಕಿ ಹಾಕಿ ಹಚ್ಚಿದ್ದಾರೆ. ಈ ವೇಳೆ ಚಿಂದಿ ಆಯುವ ಕೆಲವರು ಇದನ್ನು ಕಂಡು ನೋಟುಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರೂ ಕೂಡ ನೋಟುಗಳಿಗೆ ಹತ್ತಿಕೊಂಡಿದ್ದ ಬೆಂಕಿ ಆರಿಸಲು ಮುಂದಾಗಿದ್ದಾರೆ. ಈ ವೇಳೆ ಸುಡದ ನೋಟುಗಳು ಕೆಲವರ ಪಾಲಾದವು ಎನ್ನಲಾಗಿದ್ದು, ಉಳಿದ ಬಹುತೇಕ ನೋಟುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿತ್ತು. ದಾಖಲೆ ಇಲ್ಲದ ಹಣವಾದ್ದರಿಂದ ಐಟಿ ಅಧಿಕಾರಿಗಳ ಭಯದಿಂದ ಈ ಕೃತ್ಯ ಎಸಗಿರಬಹುದೆಂದು ಕೆಲ ನಾಗರಿಕರು ಅಭಿಪ್ರಾಯಪಟ್ಟಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ನೋಟುಗಳನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದು ಬಂದಿದೆ.