×
Ad

ಸಾದಿಕಾ ಬಾನು ಕೊಲೆ ಪ್ರಕರಣ

Update: 2016-12-10 22:37 IST

ದಾವಣಗೆರೆ, ಡಿ.10: ಕಳೆದ ನ. 23ರಂದು ನನ್ನ ಮಗಳು ಸಾದಿಕಾ ಬಾನುವನ್ನು ಕೊಲೆ ಮಾಡಿದ ಆರೋಪಿಗಳನ್ನು ಮಹಿಳಾ ಪೊಲೀಸರು ಬಂಧಿಸಲು ಮೀನ-ಮೇಷ ಎಣಿಸುತ್ತಿದ್ದು, ಕೂಡಲೇ ಬಂಧಿಸಬೇಕೆಂದು ಫಯಾಝ್ ಅಹ್ಮದ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.


 ಶನಿವಾರ ನಗರದಲ್ಲಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನ.23ರಂದು ನನ್ನ ಮಗಳು ಸಾಧಿಕ ಬಾನುವನ್ನು ಅವ ಳ ಗಂಡ ಸೈಯದ್ ಸಾದಿಕ್, ನಾದಿನಿ ಹೂರಾನ್, ಅತ್ತೆ ವಾಹಿದಾ ಬಾನು, ಮಾವ ಸೈಯದ್ ನಝರುಲ್ಲಾ, ಮೈದುನಾ ಮುಸ್ತಾಕ್ ಕೊಲೆ ಮಾಡಿರುವುದಾಗಿ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ, ಈವರೆಗೂ ಅವರನ್ನು ಬಂಧಿಸಿಲ್ಲ ಎಂದು ದೂರಿದರು.


 ಮಗಳನ್ನು ಕಳೆದುಕೊಂಡ ನಮ್ಮ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಅವಳಿಗೆ 2 ವರ್ಷದ ಗಂಡು ಮತ್ತು 4 ತಿಂಗಳ ಹೆಣ್ಣು ಮಕ್ಕಳಿದ್ದಾರೆ. ಠಾಣೆಗೆ ದೂರು ನೀಡಿ 15 ದಿನಗಳು ಕಳೆದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸುತ್ತಿಲ್ಲ. ಈ ಕುರಿತು ಠಾಣೆಯ ವಿಚಾರಿಸಿದರೆ, ‘ನೀವೇ ಆರೋಪಿಗಳ ಜೊತೆ 50 ಲಕ್ಷ ರೂ. ಪಡೆದುಕೊಂಡು ನಾಟಕವಾಡುತ್ತಿದ್ದೀರಿ’ ಎಂದು ಹೇಳುತ್ತಾರೆ ಎಂದು ಆರೋಪಿಸಿದರು. ಕಳೆದ ನಾಲ್ಕು ವರ್ಷಗಳ ಹಿಂದೆ ನಗರದ ಬೀಡಿ ಲೇಔಟ್ ನಿವಾಸಿ ಸೈಯದ್ ಸಾದಿಕ್‌ಗೆ ಸಾದಿಕಾ ಬಾನುವನ್ನು ವಿವಾಹ ಮಾಡಿಕೊಡಲಾಗಿತ್ತು. ಆದರೆ, ಸೈಯದ್ ಸಾದಿಕ್ ಸೇರಿದಂತೆ ಅವರ ಮನೆಯವರು ಸಾದಿಕಾ ಬಾನುವಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ.

ಆರೋಪಿ ಸಾದಿಕ್ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ. ಜಬೀನಾ ಬಾನು, ಮುಹಮ್ಮದ್, ಬಾಬು, ರಾಜಸಾಬ್, ರಿಯಾಝ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News