ಹಣಕ್ಕಾಗಿ ಕೊಲೆ ಬೆದರಿಕೆ: ಭಾಗಮಂಡಲ ಸುಧೀರ್‌ಕುಮಾರ್ ಆರೋಪ
ಮಡಿಕೇರಿ, ಡಿ.10: ಜಮೀನು ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮಗೆ ಕೆಲವು ವ್ಯಕ್ತಿಗಳಿಂದ ಕೊಲೆ ಬೆದರಿಕೆಯಿದ್ದು, ದೂರು ನೀಡಿದರೂ ಭಾಗಮಂಡಲ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಭಾಗಮಂಡಲ ನಿವಾಸಿ ಪಿ.ಎಸ್. ಸುಧೀರ್‌ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳಿಬ್ಬರು ಬೆದರಿಕೆಯೊಡ್ಡಿ 18 ಲಕ್ಷ ರೂ.ನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಈ ವಿಚಾರದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಂತರ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದರೆ, ಮತ್ತಷ್ಟು ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸಿದ್ದಾರೆ. ನಿರಂತರವಾಗಿ ಕೊಲೆ ಬೆದರಿಕೆಯೊಡ್ಡುತ್ತಿದ್ದು, ಈ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆೆಯಲ್ಲಿ ದೂರು ದಾಖಲಿಸಿದರೂ ಪೊಲೀಸರು ತನ್ನ ವಿರುದ್ಧವೇ ಹರಿಹಾಯ್ದಿದ್ದಾರೆಯೇ ಹೊರತು, ಕೊಲೆ ಬೆದರಿಕೆ ಒಡ್ಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಮರಳು ದಂಧೆಕೋರರಿಗೆ ಠಾಣಾಧಿಕಾರಿ ಬೆಂಬಲ ನೀಡುತ್ತಿದ್ದು, ಭಾಗಮಂಡಲದ ಮದ್ಯದಂಗಡಿಯ ಬಳಿಯ ರಸ್ತೆಯಲ್ಲಿ ಮರಳು ದಂಧೆಕೋರರು ಮಾರಕಾಸ್ತ್ರಗಳೊಂದಿಗೆ ಓಡಾಡುತ್ತಾ ಭೀತಿಯ ವಾತಾವರಣ ಮೂಡಿಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ತನ್ನ ಜೀವಕ್ಕೆ ಏನಾದರು ಆಪತ್ತು ಎದುರಾದಲ್ಲಿ ಅದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಸುಧೀರ್‌ಕುಮಾರ್ ಎಚ್ಚರಿಕೆ ನೀಡಿದರು.