ಕ್ಯೂಬಾದ ಆರೋಗ್ಯ ವ್ಯವಸ್ಥೆ ಎಷ್ಟು ಆರೋಗ್ಯಕರವಾಗಿದೆ?

Update: 2016-12-10 18:05 GMT

ಫಿಡೆಲ್ ಕ್ಯಾಸ್ಟ್ರೊರ ದೇಹ ಮಣ್ಣಾಗುತ್ತಿದ್ದಂತೆ ಬುದ್ಧಿಜೀವಿಗಳು ಅವರ ಪರಂಪರೆಯ ಉಪಯುಕ್ತತೆಯ ಬಗ್ಗೆ ಚರ್ಚಿಸಲು ಆರಂಭಿಸಿದ್ದಾರೆ. ಕ್ಯೂಬಾದ ಆರೋಗ್ಯ ವ್ಯವಸ್ಥೆ ಫಿಡೆಲ್ ಕ್ಯಾಸ್ಟ್ರೊರ ಅತ್ಯುನ್ನತ ಸಾಧನೆಗಳಲ್ಲಿ ಒಂದು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ನಿಜವಾಗಿಯೂ ಆ ವ್ಯವಸ್ಥೆ ಎಷ್ಟರ ಮಟ್ಟಿಗೆ ಉತ್ತಮವಾಗಿದೆ? ಕ್ಯೂಬಾದಲ್ಲೇ ವೈದ್ಯ ತರಬೇತಿ ಪಡೆದಿರುವ ನಾನು ಆ ಬಗ್ಗೆ ಆಂತರಿಕ ಚಿತ್ರಣವನ್ನು ಒದಗಿಸುತ್ತೇನೆ.

ಆರೋಗ್ಯರಕ್ಷಣೆಯು ಪ್ರತೀ ಪ್ರಜೆಯ ಮೂಲಭೂತ ಹಕ್ಕು ಎಂದು ನಂಬಿರುವ ಕ್ರಾಂತಿಕಾರಿ ಸಾಮಾಜಿಕ ಸಿದ್ಧಾಂತದಿಂದ ಕ್ಯೂಬಾದ ಆರೋಗ್ಯ ವ್ಯವಸ್ಥೆ ಜನ್ಮತಳೆದಿದೆ. ಅದು ರೋಗ ತಡೆಗಟ್ಟುವ ಔಷಧೋಪಾಯಗಳ ಬಗ್ಗೆ ಹೆಚ್ಚು ಕೇಂದ್ರಿತವಾಗಿದ್ದು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೂ ಅತ್ಯಂತ ಸರಳ ಪರೀಕ್ಷಾ ವಿಧಾನವನ್ನು ಉಚಿತವಾಗಿ ಒದಗಿಸುತ್ತದೆ. ದಂತ ಚಿಕಿತ್ಸೆ, ಔಷಧ ಮತ್ತು ವೈದ್ಯರ ಮನೆ ಭೇಟಿಯನ್ನೂ ಈ ವ್ಯವಸ್ಥೆ ಒಳಗೊಂಡಿದೆ.
ಕ್ಯೂಬಾದ ಆರೋಗ್ಯ ಅಂಕಿಅಂಶಗಳು ಕೂಡಾ ಈ ದೋಷರಹಿತ ವ್ಯವಸ್ಥೆಗೆ ಪೂರಕವಾಗಿದೆ. ಶಿಶು ಮರಣ ಪ್ರಮಾಣವು ಸಾವಿರಕ್ಕೆ 4.2 ಶೇ. (ಬ್ರಿಟನ್‌ನಲ್ಲಿ 2015ರಲ್ಲಿ ಈ ಪ್ರಮಾಣ ಸಾವಿರ ಜನನಕ್ಕೆ 3.5 ಶೇ. ಆಗಿತ್ತು), ಪುರುಷರ ಜೀವಿತಾವಧಿ ಸರಾಸರಿ 77 ವರ್ಷ ಮತ್ತು ಮಹಿಳೆಯರಿಗೆ ಸರಾಸರಿ 81 ವರ್ಷ (ಬ್ರಿಟನ್‌ನಲ್ಲಿ ಪುರುಷರ ಸರಾಸರಿ ಜೀವಿತಾವಧಿ 79 ವರ್ಷ ಮತ್ತು ಮಹಿಳೆಯರದ್ದು 83 ವರ್ಷಗಳು) ಮತ್ತು ವೈದ್ಯ ಮತ್ತು ರೋಗಿಯ ಅನುಪಾತ 150 ರೋಗಿಗಳಿಗೆ ಒಬ್ಬ ವೈದ್ಯರಂತಿದ್ದು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚಾಗಿದೆ. (ವಿಶ್ವ ಬ್ಯಾಂಕ್‌ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬ್ರಿಟನ್‌ನಲ್ಲಿ ಈ ಅನುಪಾತ 1000 ರೋಗಿಗಳಿಗೆ 2.8 ವೈದ್ಯರು). ಹಾಗಾಗಿ ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕ್ಯೂಬಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ‘‘ಇದು ಬಹಳಷ್ಟು ದೇಶಗಳಿಗೆ ಮಾದರಿಯಾಗಿದೆ’’ ಎಂದು ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ.

ಕಡಿಮೆಯಿಂದ ಹೆಚ್ಚನ್ನು ಮಾಡುವುದು
ಇದು ಕೇವಲ ಪ್ರಚಾರತಂತ್ರವೇ? ನನ್ನ ಉತ್ತರ ಅಲ್ಲ. ನಾನು ಈ ದೇಶದಲ್ಲಿ ಏಳು ವರ್ಷಗಳ ಕಾಲ ವೈದ್ಯಕೀಯ ವಿದ್ಯಾರ್ಥಿಯಾಗಿ ಕಳೆದ ಅನುಭವ ಹೊಂದಿದ್ದೇನೆ ಮತ್ತು ಈ ಆರೋಗ್ಯ ವ್ಯವಸ್ಥೆಯ ಗುಣಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ಚೆನ್ನಾಗಿ ಅರಿತಿದ್ದೇನೆ.
ಓರ್ವ ಅಮೆರಿಕನ್ ಪ್ರಜೆಯಾಗಿ, ಕ್ಯೂಬಾದ ಜನರು ತಮ್ಮ ಅತ್ಯಲ್ಪಸಂಪನ್ಮೂಲಗಳಿಂದಲೇ ಎಷ್ಟೊಂದು ಸಾಧಿಸಿದ್ದಾರೆ ಎಂಬುದೇ ನನ್ನನ್ನು ಚಕಿತಗೊಳಿಸುತ್ತಿತ್ತು. ಆರೋಗ್ಯ ಕಾರ್ಯಕರ್ತರು ಪ್ರದರ್ಶಿಸುವ ವೃತ್ತಿಪರತೆ ಮತ್ತು ಮಾನವೀಯತೆ ನಿಜವಾಗಿಯೂ ಶ್ಲಾಘನೀಯ. ಅತ್ಯಂತ ಕಡಿಮೆ ವೇತನ ಪಡೆದರೂ (ವೈದ್ಯರಿಗೆ ಮಾಸಿಕ 52 ಪೌಂಡ್ ವೇತನ) ತಮ್ಮ ಸಹೋದ್ಯೋಗಿಗಳನ್ನು ಆರೋಗ್ಯ ಯೋಜನೆಯಡಿಯಲ್ಲಿ ವೆನಿಝುವೆಲಾ ಮತ್ತು ಬ್ರೆಝಿಲ್ ಮುಂತಾದ ದೇಶಗಳಿಗೆ ಕಳುಹಿಸಲ್ಪಟ್ಟಾಗ ದಿನರಾತ್ರಿಯೆನ್ನದೆ ದುಡಿಯುತ್ತಾರೆ.
ಇದರ ಹೊರತಾಗಿ ಯಾವುದೇ ರೀತಿಯ ಅತ್ಯಾಧುನಿಕ ರೋಗಪತ್ತೆ ತಂತ್ರಜ್ಞಾನಗಳಿಲ್ಲದೆ ಮತ್ತು ಪ್ರಕ್ರಿಯೆಗಳನ್ನು ನಡೆಸಲು ಅಗತ್ಯವಿರುವ ಮುಖ್ಯ ಸಾಧನಗಳು ಆಸ್ಪತ್ರೆಗೆ ತಲುಪಲು ವಾರಗಳೇ ತೆಗೆದುಕೊಳ್ಳುವ ಮಧ್ಯೆಯೂ ಮತ್ತು ವಿದ್ಯುತ್ ಹಾಗೂ ನೀರಿನ ಅಭಾವದ ನಡುವೆಯೂ ಅವರು ಇದನ್ನು ಮಾಡುತ್ತಾರೆ. ಇವೆಲ್ಲಾ ಅಡೆತಡೆಗಳನ್ನು ಮತ್ತು ಸವಾಲುಗಳನ್ನು ದಾಟಿ ಮುನ್ನುಗ್ಗುವ ಶಕ್ತಿಯನ್ನು ಅವರು ಪ್ರದರ್ಶಿಸುತ್ತಾ ಪ್ರಶಂಸೆಗೆ ತಕ್ಕುದಾದ ಸೇವೆಯನ್ನು ಒದಗಿಸುತ್ತಾರೆ.


ಸಾಧಾರಣವಾಗಿ ಕ್ಯೂಬಾದ ವೈದ್ಯರು ಹೇಳುವ ಮಾತೆಂದರೆ ಅವರ ದೇಶದಲ್ಲಿ ವೈದ್ಯರಾಗುವುದು ಹಣ ಸಂಪಾದಿಸುವ ಸಲುವಾಗಿಯಲ್ಲ. ಬದಲಾಗಿ ಇತರರಿಗೆ ನೆರವಾಗಬೇಕೆಂಬ ಹಂಬಲಕ್ಕೆ. ವೈದ್ಯಕೀಯ ಶಾಲೆಯಲ್ಲಿ ನನಗೆ ಕಲಿಸಿದ ಮೊದಲ ವಿಷಯವೂ ಇದೇ. ಇದೊಂದು ಉದಾತ್ತ ಭಾವನೆಯಾದರೂ ಕ್ಯೂಬಾ ಮಾದರಿಯ ಮುಖ್ಯ ಸಮಸ್ಯೆ ಕೂಡಾ ಇದುವೇ. ಸರಕಾರವು ಓರ್ವ ವ್ಯಕ್ತಿಯ ಆರೋಗ್ಯದ ಮೇಲೆ ವಾರ್ಷಿಕ 300ರಿಂದ 400 ಡಾಲರ್ (240-320 ಪೌಂಡ್) ಖರ್ಚು ಮಾಡುತ್ತದೆ, ವೈದ್ಯರಿಗೆ ಮಾಸಿಕ 64 ಡಾಲರ್ (52 ಪೌಂಡ್) ಪಾವತಿಸುತ್ತದೆ ಆದರೆ ತನ್ನ ಸಾಗರೋತ್ತರ ವೈದ್ಯಕೀಯ ಯೋಜನೆಗಳ ಮೂಲಕ ವಾರ್ಷಿಕ 8 ಬಿಲಿಯನ್ ಡಾಲರ್ (6.4 ಬಿಲಿಯನ್ ಪೌಂಡ್) ಲಾಭಗಳಿಸುತ್ತದೆ. ಸರಕಾರ ಗಳಿಸಿದ ಲಾಭವನ್ನು ಎಲ್ಲಿ ಹೂಡುತ್ತದೆ ಎಂಬುದು ಹೇಳುವುದು ಕಷ್ಟ. ಯೋಜನೆಗಳಲ್ಲಿ ಸಿಗುವ ವೇತನವು ಸಾಮಾನ್ಯವಾಗಿ ಹೆಚ್ಚಾಗಿರುವುದರಿಂದ (ಅದರಲ್ಲೂ ಮೂರರಷ್ಟು ಭಾಗವನ್ನು ಕ್ಯೂಬಾ ಸರಕಾರ ತೆಗೆದಿಡುತ್ತದೆ) ಅನೇಕ ವೈದ್ಯರು ಈ ಯೋಜನೆಗಳಲ್ಲಿ ಭಾಗವಹಿಸಲು ಮುಂದಾಗುತ್ತಾರೆ. ಸಾವಿರಾರು ವೈದ್ಯರನ್ನು ಸಾಗರೋತ್ತರ ಕಳುಹಿಸುವುದು ಶ್ಲಾಘನೀಯ ಕೆಲಸವಾದರೂ ಇದರಿಂದ ಆಂತರಿಕ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ. ಕೆಲವೇ ವೈದ್ಯರು ಮತ್ತು ತಜ್ಞರು ಇರುವ ಪರಿಣಾಮವಾಗಿ ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ರೋಗಿಗಳ ಸಾಲು ಕಾಯುವ ಸಮಯ ಹೆಚ್ಚಾಗುತ್ತಾ ಸಾಗುತ್ತದೆ. ಒತ್ತಡದಿಂದ ಕೂಡಿದ ವೃತ್ತಿಯಲ್ಲಿ ವೈದ್ಯರು ಕಡಿಮೆ ಸಂಪನ್ಮೂಲಗಳಲ್ಲಿ ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ. ಒಬ್ಬ ರೋಗಿಯು ತಜ್ಞ ವೈದ್ಯರನ್ನು ಕಾಣುವ ಸಲುವಾಗಿ ಒಂದು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ ಸಾಗಬೇಕಾದ ಅನಿವಾರ್ಯತೆ ಬೀಳುತ್ತದೆ. ಯಾಕೆಂದರೆ ಆ ಪ್ರಾಂತದ ವೈದ್ಯನನ್ನು ಸರಕಾರ ವೆನಿಝುವೆಲಾಕ್ಕೆ ಕಳುಹಿಸಿರುತ್ತದೆ. ಹೀಗೆ ಪ್ರಪಂಚದಾದ್ಯಂತ ವೈದ್ಯರನ್ನು ಕಳುಹಿಸಿದ ಪರಿಣಾಮ ಅವರಿಂದ ತೆರವಾದ ಜಾಗವನ್ನು ತುಂಬುವ ಸಲುವಾಗಿಯೇ ಕ್ಯೂಬಾದ್ಯಂತ ಹೆಚ್ಚು ಹೆಚ್ಚು ವೈದ್ಯಕೀಯ ವೃತ್ತಿಪರ ತರಬೇತಿಗಳನ್ನು ನೀಡಲು ಮುಖ್ಯ ಕಾರಣವಾಗಿರಬಹುದು. ಕುಸಿಯುತ್ತಿರುವ ಮೂಲಸೌಕರ್ಯ
ಕ್ಯೂಬಾದ ಆರೋಗ್ಯ ಮೂಲಸೌಕರ್ಯ ಕೂಡಾ ಗಂಭೀರವಾಗಿ ಯೋಚಿಸಬೇಕಾದ ಅನಿವಾರ್ಯತೆಯನ್ನು ಹೊಂದಿದೆ. ಇಲ್ಲಿನ ಕೆಲವೊಂದು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಅತ್ಯಂತ ದುಸ್ತರ ಸ್ಥಿತಿಯಲ್ಲಿದ್ದು ಕೂಡಲೇ ಸರಿಪಡಿಸಬೇಕಾದ ಅಗತ್ಯವಿದೆ. ಹೆಚ್ಚು ಆಧುನಿಕ ವೈದ್ಯಕೀಯ ಸಾಧನಗಳು ಮತ್ತು ಸ್ಥಿರ ವಿದ್ಯುತ್ ಮತ್ತು ನೀರಿನ ಅಗತ್ಯ ಕೂಡಾ ಅಷ್ಟೇ ತುರ್ತಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಕ್ಯೂಬಾ ಸರಕಾರವೊಂದೇ ಕಾರಣವೆಂದು ಹೇಳಲಾಗದು. ಯಾಕೆಂದರೆ ಅಮೆರಿಕವು ಕ್ಯೂಬಾದ ಮೇಲೆ ಹೇರಿದ ವ್ಯಾಪಾರ ನಿರ್ಬಂಧವೂ ಹಾನಿಕಾರಕ ಪರಿಣಾಮವನ್ನು ಬೀರಿದೆ. ಇದಕ್ಕೊಂದು ಉದಾಹರಣೆಯೆಂದರೆ ವೈದ್ಯಕೀಯ ಸಾಧನವನ್ನು ಸಮೀಪದಲ್ಲೇ ಇರುವ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬದಲು ಅತ್ಯಂತ ದೂರದಲ್ಲಿರುವ ಚೀನಾದಿಂದ ತರಿಸಿಕೊಳ್ಳಬೇಕಾದ ಪರಿಸ್ಥಿತಿ. ಎಲ್ಲಾ ಸಂಕಷ್ಟಗಳ ಹೊರತಾಗಿಯೂ ಪ್ರಾಥಮಿಕ ಆರೋಗ್ಯ ಮತ್ತು ತಡೆಗಟ್ಟುವಿಕೆಯ ಬಗ್ಗೆ ಕ್ಯೂಬಾ ನಿರಂತರವಾಗಿ ಪ್ರಾಮುಖ್ಯತೆ ನೀಡಿರುವುದೇ ಅದರ ಯಶಸ್ಸಿಗೆ ಕಾರಣವಾಗಿರಬಹುದು.
ಅಮೆರಿಕವೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳಿಗೆ ದ್ವೀಪರಾಷ್ಟ್ರವು ವಾರ್ಷಿಕವಾಗಿ ನೂರಾರು ವಿದ್ಯಾರ್ಥಿವೇತನಗಳನ್ನು ನೀಡುತ್ತದೆ. ಈ ವಿದ್ಯಾರ್ಥಿವೇತನಗಳನ್ನು ಸಾಮಾನ್ಯವಾಗಿ ತಮ್ಮ ಸಾಮಾಜಿಕ ಆರ್ಥಿಕ ಹಿನ್ನೆಲೆಯಿಂದಾಗಿ ವೈದ್ಯಕೀಯ ಶಾಲೆಯನ್ನು ಸೇರಲಾಗದ ಬಡಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ನೂರಕ್ಕೂ ಹೆಚ್ಚು ದೇಶಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಲ್ಯಾಟಿನ್ ಅಮೆರಿಕದ ಸ್ಕೂಲ್ ಆಫ್ ಮೆಡಿಸಿನ್ ಪಶ್ಚಿಮ ಗೋಳದಲ್ಲೇ ಅತ್ಯಂತ ದೊಡ್ಡ ವೈದ್ಯಕೀಯ ಶಾಲೆಗಳಲ್ಲಿ ಒಂದು.
ಕ್ಯೂಬಾದ ಆರೋಗ್ಯ ವ್ಯವಸ್ಥೆ ಸಮಯದ ಪರೀಕ್ಷೆಯನ್ನು ಸಹಿಸಿ ನಿಂತಿದೆ. ನನ್ನ ಸಹಪಾಠಿಗಳ ಅಮೆರಿಕದಲ್ಲಿರುವ ವೈದ್ಯಕೀಯ ಶಾಲೆಗಳನ್ನು ಸೇರಿ ಸಾವಿರಾರು ಡಾಲರ್ ಸಾಲದಲ್ಲಿ ಬಿದ್ದಿದ್ದರೆ ವಿದೇಶಿಗನಾದ ನನಗೂ ಕೂಡಾ ಕ್ಯೂಬಾದ ಆರೋಗ್ಯ ವ್ಯವಸ್ಥೆ ಉಚಿತ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ನೀಡಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್ ಸರ್ಜರಿ) ಮಾಡಿಸಿಕೊಂಡು ಜೀವನವಿಡೀ ಸಾಲದಲ್ಲಿ ಮುಳುಗುವ ಅಗತ್ಯವಿಲ್ಲ ಎಂಬುದನ್ನು ಅದು ಖಚಿತಪಡಿಸುತ್ತದೆ. ಅದು ಜಾಗತಿಕವಾಗಿ ಸ್ಪರ್ಧಾತ್ಮಕ ಜೈವಿಕ ತಂತ್ರಜ್ಞಾನ ಮತ್ತು ಔಷಧಿ ಉದ್ಯಮಗಳನ್ನು ಸೃಷ್ಟಿಸಿದೆ. ಜನರ ಸಾಮಾಜಿಕ ಆರ್ಥಿಕ ಸ್ಥಿತಿಯಿಂದಾಗಿ ಅದು ಅವರನ್ನು ದೂರಮಾಡುವುದಿಲ್ಲ. ಅದು ಅಲ್ಲಿನ ಜನರಿಗಾಗಿ ಅಸ್ತಿತ್ವದಲ್ಲಿದೆ. ಖಂಡಿತವಾಗಿಯೂ ಅದರಲ್ಲಿ ಹುಳುಕುಗಳು ಮತ್ತು ಸವಾಲುಗಳಿದ್ದು ಅವುಗಳನ್ನು ಸರಿಪಡಿಸುವ ಅಗತ್ಯವಿದೆ. ಆದರೆ ಅದು ಕೇವಲ ಅಧಿಕಾರಕ್ಕಾಗಿ ನಡೆಸುವ ಪ್ರಚಾರ ಸಾಧನವಲ್ಲ.

Writer - ರಿಚ್ ವಾರ್ನರ್

contributor

Editor - ರಿಚ್ ವಾರ್ನರ್

contributor

Similar News