ಬಿಜೆಪಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ಬರುವುದೂ ಇಲ್ಲ: ಈಶ್ವರಪ್ಪ
ಬಾಗಲಕೋಟೆ, ಡಿ. 11: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್ ಸಭೆಯಲ್ಲಿ ಪಾಲ್ಗೊಂಡ ಸಂಬಂಧ ತನಗೆ ಬಿಜೆಪಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ಬರುವುದೂ ಇಲ್ಲ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಕತ್ತು ಕೊಯ್ದರೂ, ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಹಿಂದುಳಿದ ಮತ್ತು ದಲಿತ (ಹಿಂದ) ಸಂಘಟನೆಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದರು.
2017ರ ಜನವರಿ 26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಬಾಗಲಕೋಟೆಯಲ್ಲಿ ಜರುಗಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ನನಗೆ ಬಿಜೆಪಿಯಿಂದ ಯಾರೊಬ್ಬರೂ ನೋಟಿಸ್ ನೀಡಿಲ್ಲ, ನೀಡುವುದೂ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತು ‘ಹಿಂದ’ ಸಂಘಟನೆಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಬ್ರಿಗೇಡ್ ಸಮಾವೇಶದಲ್ಲಿಯೂ ಬಿ.ಎಸ್.ಯಡಿಯೂರಪ್ಪನವರೂ ಪಾಲ್ಗೊಳ್ಳಲಿದ್ದಾರೆ ಎಂದು ಈಶ್ವರಪ್ಪ ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿನ ಹಿಂದುಳಿದ ವರ್ಗ ಮತ್ತು ದಲಿತರಿಗೆ ತೀವ್ರ ಅನ್ಯಾಯವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದ ಅವರು, ಶೋಷಿತ ಸಮುದಾಯಗಳನ್ನು ಸಂಘಟಿಸಿ, ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಿದ್ದೇನೆ ಎಂದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತು ಹಿಂದ ಸಂಘಟನೆ ಜಾತ್ಯತೀತ ಸಂಘಟನೆ. ಬ್ರಿಗೇಡ್‌ನಿಂದ ಬಿಜೆಪಿಗೆ ಯಾವುದೇ ಕಾರಣಕ್ಕೂ ಹಿನ್ನೆಡೆ ಆಗುವುದಿಲ್ಲ, ಬದಲಿಗೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.