ಈಶ್ವರಪ್ಪ ಉಚ್ಚಾಟಿಸಲು ಶಾಗೆ ಬಿಎಸ್‌ವೈ ದೂರು..?
ಬಿಎಸ್‌ವೈ ವಿರೋಧಿ ಬಣದಿಂದಲೂ ಪ್ರತಿದೂರು!!
ಹೈಕಮಾಂಡ್ ಕಂಗಾಲು
ದಾರಿಕಾಣದ ಕಾರ್ಯಕರ್ತರು
ಬಿ. ರೇಣುಕೇಶ್
ಶಿವಮೊಗ್ಗ, ಡಿ. 11: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯಿಂದ ಹೊರಗುಳಿಯುವಂತೆ ತಾವು ಹೊರಡಿಸಿದ್ದ ಆದೇಶ ಧಿಕ್ಕರಿಸಿರುವ ಕೆ.ಎಸ್.ಈಶ್ವರಪ್ಪವಿರುದ್ಧ ಶಿಸ್ತುಕ್ರಮ ಜರಗಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರಾಷ್ಟ್ರಾಧ್ಯಕ್ಷ ಅಮಿತ್‌ಶಾಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಇದರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪನಡುವೆ ಕೆಲ ತಿಂಗಳುಗಳಿಂದ ನಡೆದುಕೊಂಡು ಬರುತ್ತಿರುವ ಮುಸುಕಿನ ಗುದ್ದಾಟ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇದೀಗ ಈ ಇಬ್ಬರು ಮುಖಂಡರ ನಡುವಿನ ಕಲಹ ರಾಷ್ಟ್ರೀಯ ಮುಖಂಡರ ಅಂಗಳಕ್ಕೆ ಆಗಮಿಸಿದೆ. ದೂರು: ಇತ್ತೀಚೆಗೆ ಯಡಿಯೂರಪ್ಪಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಪಕ್ಷದ ಯಾವೊಬ್ಬ ಮುಖಂಡರೂ ಭಾಗವಹಿಸಬಾರದು. ಒಂದು ವೇಳೆ ಭಾಗವಹಿಸಿದರೆ, ಅಂತವರ ವಿರುದ್ಧ ಶಿಸ್ತುಕ್ರಮ ಜರಗಿಸಲಾಗುವುದು ಎಂದು ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಈ ಆದೇಶವನ್ನು ಧಿಕ್ಕರಿಸಿದ್ದ ಈಶ್ವರಪ್ಪಅವರು ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿಯ ನಂದಗಡದಲ್ಲಿ ನಡೆದ ಬ್ರಿಗೇಡ್ ಸಭೆಯಲ್ಲಿ ಭಾಗವಹಿಸಿದ್ದರು. ‘ಪಕ್ಷ ನೀಡುವ ನೋಟಿಸ್‌ಗೆ ಹೆದರುವ ಪ್ರಶ್ನೆಯೇ ಇಲ್ಲ. ನೋಟಿಸ್ ನೀಡಿದರೆ ಸೂಕ್ತ ಉತ್ತರ ನೀಡುತ್ತೇನೆ. ಬ್ರಿಗೇಡ್‌ಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಮುಂದಿನ ದಿನಗಳಲ್ಲಿಯೂ ಬ್ರಿಗೇಡ್ ಸಭೆಗ ಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ’ ಎಂದು ಈಶ್ವರಪ್ಪ ರಾಜ್ಯಾಧ್ಯಕ್ಷ ಬಿಎಸ್‌ವೈಗೆ ತಿರುಗೇಟು ನೀಡಿದ್ದರು. ಮತ್ತೊಂದೆಡೆ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿದ್ದ ಕೆಲ ಮುಖಂಡರು, ‘ಪಕ್ಷ ನೀಡುವ ನೊಟೀಸ್‌ನ್ನು ಹರಿದು ಹಾಕಲಾಗುವುದು.’ ಎನ್ನುವ ಮೂಲಕ ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ುಡುಗಿದ್ದರು.
ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಎಸ್‌ವೈ, ಈಶ್ವರಪ್ಪ ಅವರು ನಂದಗಡದಲ್ಲಿ ನಡೆದ ಬ್ರಿಗೇಡ್ ಸಭೆಯಲ್ಲಿ ಭಾಗವಹಿಸಿರುವ ವಿವರಗಳು ಹಾಗೂ ಇತ್ತೀಚೆಗೆ ಅವರು ನೀಡಿದ್ದ ಹೇಳಿಕೆಗಳ ಪತ್ರಿಕಾ ತುಣುಕುಗಳ ವಿವರಗಳನ್ನು ಸಂಗ್ರಹಿಸಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ತರ್ಜುಮೆಗೊಳಿಸಿ, ಕಾರ್ಯಕ್ರಮಗಳ ಫೋಟೊಗಳ ಸಮೇತ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಳುಹಿಸಿಕೊಟ್ಟಿದ್ದರು. ‘ ನಿರಂತರವಾಗಿ ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವ ಅವರಿಗೆ ನೋಟಿಸ್ ಜಾರಿಗೊಳಿಸಬೇಕು. ಅನಿವಾರ್ಯವಾದಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಈ ಮೂಲಕ ಪಕ್ಷದಲ್ಲಿ ಶಿಸ್ತು ಕಾಯ್ದುಕೊಳ್ಳಲು ಒತ್ತು ನೀಡಬೇಕು’ ಎಂದು ಯಡಿಯೂರಪ್ಪ ಅಮಿತ್‌ಶಾಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ
ಎಂದು ತಿಳಿದು ಬಂದಿದೆ. ಕಷ್ಟ?: ಮತ್ತೊಂದೆಡೆ ಈಶ್ವರಪ್ಪ ಅವರು ಬಿಎಸ್‌ವೈ ವಿರುದ್ಧ ಸಾರಿರುವ ಸಮರಕ್ಕೆ ಒಳಗೊಳಗೆ ಪಕ್ಷದ ಯಡಿಯೂರಪ್ಪನವರ ವಿರೋಧಿ ನಾಯಕರು ಬೆಂಬಲ ವ್ಯಕ್ತಪಡಿಸು ತ್ತಿದ್ದಾರೆ. ಬಿಎಸ್‌ವೈ ಅನುಸರಿಸುತ್ತಿರುವ ಏಕಪಕ್ಷೀಯ ಧೋರಣೆ
ವಿರುದ್ಧ ಅಮಿತ್ ಶಾಗೆ ಈಗಾಗಲೇ ದೂರು ನೀಡಿದ್ದು, ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರ ವಿರುದ್ಧ ಶಿಸ್ತುಕ್ರಮ ಜರಗಿಸಬಾರದು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ‘ಈಶ್ವರಪ್ಪ ಅವರು ಪಕ್ಷದ ನಿಷ್ಠಾವಂತ, ಹಿರಿಯ ಕಾರ್ಯ ಕರ್ತರಾಗಿದ್ದಾರೆ. ಆದರೆ, ಯಡಿಯೂರಪ್ಪ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಸ್ಥಾನಮಾನ ಕಲ್ಪಿಸದೆ ಕಡೆಗಣಿಸುತ್ತಿದ್ದಾರೆ. ಈ ಕಾರಣ ದಿಂದಲೇ ಈಶ್ವರಪ್ಪ ಅವರು ಬ್ರಿಗೇಡ್ ಹುಟ್ಟು ಹಾಕುವಂತಾಗಿದೆ. ಪಕ್ಷದಲ್ಲಿ ಬಿಎಸ್‌ವೈ ಮತ್ತವರ ಬೆಂಬಲಿಗರ ದರ್ಬಾರು ಮಿತಿಮೀರಿದೆ. ನಿಷ್ಠಾವಂತ ಮುಖಂಡರನ್ನು ಕಡೆಗಣಿಸಲಾಗುತ್ತಿದೆ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ಯಾರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳುವ ಕೆಲಸ ಮಾಡುತ್ತಿಲ್ಲ’ ಎಂದು ಯಡಿಯೂರಪ್ಪ ವಿರುದ್ಧ ರಾಷ್ಟ್ರೀಯ ವರಿಷ್ಠರಿಗೆ ಆರೋಪಗಳ ಪಟ್ಟಿಯನ್ನೇ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕುತೂಹಲ: ಪಕ್ಷದ ರಾಷ್ಟ್ರೀಯ ಮುಖಂಡರು ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಜರಗಿಸುತ್ತಾರಾ? ಇಲ್ಲವೇ? ಎಂಬುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಈಶ್ವರಪ್ಪ ವಿರುದ್ಧ ವರಿಷ್ಠರು ನೋಟಿಸ್ ಜಾರಿಗೊಳಿಸಬಹುದಾಗಿದೆ. ಆದರೆ, ಉಚ್ಚಾಟನೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತಿವೆ. ಮತ್ತೊಂದೆಡೆ ಯಡಿಯೂರಪ್ಪ ಅವರು ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಪಟ್ಟು ಹಿಡಿದಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುವಂತಾಗಿದೆ.
ಬೆಂಬಲಿಗರಲ್ಲಿ ಧೈರ್ಯ ತುಂಬುತ್ತಿರುವ ಈಶ್ವರಪ್ಪ..!
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಭಾಗವಹಿಸಿಯೇ ಸಿದ್ಧ ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪಅವರಿಗೆ ಸವಾಲು ಹಾಕಿರುವ ಈಶ್ವರಪ್ಪಅವರ ಮುಂದಿನ ನಡೆ ಅವರ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ. ತಮ್ಮನ್ನು ಭೇಟಿಯಾಗುತ್ತಿರುವ ಬೆಂಬಲಿಗರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಂತೆ ಏನೂ ಆಗುವುದಿಲ್ಲ. ಎಲ್ಲವೂ ಸರಿ ಹೋಗಲಿದೆ ಎಂದು ಹೇಳುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಈಶ್ವರಪ್ಪ ಬೆಂಬಲಿಗರೊಬ್ಬರು ಮಾಹಿತಿ ನೀಡಿದ್ದಾರೆ.
ಇಂದು ಬಿಎಸ್‌ವೈ ಸುದ್ದಿಗೋಷ್ಠಿ
ಈಶ್ವರಪ್ಪವಿರುದ್ಧ ನಿರ್ಣಾಯಕ ಸಮರ ಸಾರಿರುವ ಯಡಿಯೂರಪ್ಪ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಹಲವು ದಿನಗಳ ಬಳಿಕ ಬಿಎಸ್‌ವೈ ತಮ್ಮ ತವರೂರು ಶಿವಮೊಗ್ಗ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಈಶ್ವರಪ್ಪ ಅವರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.