ಸಮಾಜ ಬದಲಾವಣೆಗೆ ಯುವಕರು ಪಣ ತೊಡಲಿ: ಸಂತೋಷ್ ಹೆಗ್ಡೆ
ಮೂಡಿಗೆರೆ, ಡಿ.11: ತಪ್ಪುಮಾಡಿದವರಿಗೆ ಶಿಕ್ಷೆ ಕೊಡುವಂತಹ ಸಮಾಜದಲ್ಲಿದ್ದರೂ ಕೂಡ ಅದು ಸಾಧ್ಯವಾಗದೇ ಇರುವುದು ದುರಂತ. ಇದು ಶ್ರೀಮಂತ ಮತ್ತು ಅಧಿಕಾಕ್ಕೆ ಬೆಲೆ ಕೊಡುವ ಸಮಾಜವಾಗಿದೆ.ಇದನ್ನು ಬದಲಾಯಿಸಲು ಯುವ ಜನತೆ ಮುಂದೆ ಬರಬೇಕಾಗಿದೆ ಎಂದು ೋಕಾಯುಕ್ತ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.
ಅವರು ತಾಲೂಕಿನ ಸಮೀಪದ ಹಳಸೆ ಬಳಿ ನೂತನವಾಗಿ ಪ್ರಾರಂಭಗೊಂಡ ದಿ ಕಾಫಿ ಕೋರ್ಟ್ ಸಂಸ್ಥೆಯ ಬೃಹತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಬಹಳಷ್ಟು ದೊಡ್ಡ ಹಗರಣಗಳು ನಡೆದಿವೆ. 50 ದಶಕದಲ್ಲಿ ಮುಂಡಾ ನಗರವಾಲ್ ಹಗರಣ ನಡೆದಿದ್ದು, ಕಾಮನ್‌ವೆಲ್ತ್ ಹಗರಣ, 2ಜಿ. ಹಗರಣ, ಕಲ್ಲಿದ್ದಲು ಹಗರಣಗಳು ಜನರನ್ನು ಬೆಚ್ಚಿ ಬೀಳಿಸಿದೆ ಎಂದು ತಿಳಿಸಿದರು.
ಇಷ್ಟೊಂದು ಹಣ ಸೋರಿಕೆಯಾದರೆ ಜನಸಾಮಾನ್ಯರು ಎಷ್ಟು ಕಷ್ಟ ಅನುಭವಿಸಬಹುದೆಂದು ಊಹಿಸಲು ಸಾಧ್ಯವಿಲ್ಲ. ಆರೂವರೆ ಸಾವಿರ ಕೋಟಿ ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ 2016-17ನೆ ಸಾಲಿನ ಬಜೆಟ್‌ನ ಕಡಿಮೆ ಮೊತ್ತದಲ್ಲಿ ಯಾವ ಅಭಿವೃದ್ಧಿ ಕಾಣಲು ಸಾಧ್ಯವೆಂದು ಪ್ರಶ್ನಿಸಿದ ಅವರು, ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗ ಈ ಎಲ್ಲದರಲ್ಲೂ ನಾವು ದುರಾಸೆ ಕಾಣುತ್ತಿದ್ದೇವೆ. ಆಡಳಿತ ವ್ಯವಸ್ಥೆಯಲ್ಲಿ ಈ ಸಮಾಜದಲ್ಲಿ ಒಂದು ಮಗುವಿಗೆ ಭವಿಷ್ಯ ನೀಡುವ ಶಕ್ತಿ ಇದ್ದರೂ ಕೂಡ, ಹಣದ ಆಸೆಗಾಗಿ ಮಾನವೀಯತೆ ಮರೆಯುತ್ತಿರುವುದರ ಜೊತೆಗೆ ಬಡಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವುದು ದುರಂತ ಎಂದು ಹೇಳಿದರು.
ಬಳಿಕ ಖ್ಯಾತ ಹಿನ್ನಲೆ ಗಾಯಕಿ ಎಂ.ಡಿ. ಪಲ್ಲವಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ ಕಾಫಿ ಕೋರ್ಟ್ ಸಂಸ್ಥೆ ಅಧ್ಯಕ್ಷ ಡಿ.ಬಿ.ಜಯಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್‌ಸಿಗಳಾದ ಡಾ.ಮೋಟಮ್ಮ, ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ, ಮಾಜಿ ಸಂಸದ ಬಿ.ಎಲ್.ಶಂಕರ್, ಜಿಲ್ಲಾಧಿಕಾರಿ ಜಿ.ಸತ್ಯವತಿ, ಹಳಸೆ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.