ನೋಟು ನಿಷೇಧ ಕುರಿತು ಇಬ್ಬಗೆ ನಿಲುವೇಕೆ? : ಪ್ರಧಾನಿ ಮೋದಿಗೆ ಮಾಜಿ ಐಎಎಸ್ ಅಧಿಕಾರಿಯ ಪ್ರಶ್ನೆ

Update: 2016-12-12 16:00 GMT

ಹೊಸದಿಲ್ಲಿ,ಡಿ.12: ಮಾಜಿ ಐಎಎಸ್ ಅಧಿಕಾರಿ,ಕೇಂದ್ರ ಸರಕಾರದ ನಿವೃತ್ತ ಕಾರ್ಯದರ್ಶಿಯಾಗಿರುವ ವಿಶಾಖಪಟ್ಟಣಂ ನಿವಾಸಿ ಇಎಎಸ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆಯುವ ಮೂಲಕ ನೋಟು ರದ್ದತಿ ಕುರಿತಂತೆ ಕೇಂದ್ರ ಸರಕಾರದ ಇಬ್ಬಗೆ ನಿಲುವನ್ನು ಬಯಲಿಗೆಳೆದಿದ್ದಾರೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಮಹೇಶ ಶರ್ಮಾ ಹಾಗೂ ಗಣಿ ಉದ್ಯಮಿ ಬಿಜೆಪಿಯವರೇ ಆಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ತಮ್ಮ ಪುತ್ರಿಯರ ವಿವಾಹಗಳನ್ನು ವೈಭವೋಪೇತವಾಗಿ ನಡೆಸಿರುವುದನ್ನು ತನ್ನ ಪತ್ರದಲ್ಲಿ ಉಲ್ಲೇಖಿಸಿರುವ ಶರ್ಮಾ, ಅವರಿಗೆ ಜನಸಾಮಾನ್ಯರಿಗಿಂತ ಭಿನ್ನವಾದ ನಿಯಮಗಳಿವೆಯೇ ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ರಾಜಕೀಯ ಮುಖಂಡರು ತಮ್ಮ ಮಕ್ಕಳ ಅದ್ದೂರಿ ಮದುವೆಗಳನ್ನು ಮಾಡುತ್ತಿದ್ದರೆ ಇನ್ನೊಂದೆಡೆ ನೋಟು ರದ್ದತಿಯಿಂದಾಗಿ ಭಾರತದ ಬಡಜನರು ಊಹಿಸಲೂ ಸಾಧ್ಯವಿಲ್ಲದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಅವರು ಬೆಟ್ಟು ಮಾಡಿದ್ದಾರೆ.ಗಡ್ಕರಿಯವರು ತಮ್ಮ ಪುತ್ರಿಯ ಮದುವೆಗೆ ಅತಿಥಿಗಳನ್ನು ಕರೆತರಲು 50 ಬಾಡಿಗೆ ವಿಮಾನಗಳನ್ನು ಪಡೆದುಕೊಂಡಿದ್ದಾರೆ ಮತ್ತು ನಗದು ಹಣದ ಕೊರತೆಯಿಂದಾಗಿ ಕುಟುಂಬಗಳು ನಿಗದಿತ ಮದುವೆಗಳನ್ನು ರದ್ದುಗೊಳಿಸುತ್ತಿವೆ ಎಂಬ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಎರಡು ವಿಭಿನ್ನ ವರದಿಗಳನ್ನು ಶರ್ಮಾ ತನ್ನ ಪತ್ರದೊಂದಿಗೆ ಲಗತ್ತಿಸಿದ್ದಾರೆ.ಎನ್‌ಡಿಎ ಸಚಿವರಿಗಾಗಿಯೇ ಒಂದು ನಿಯಮಾವಳಿಗಳು ಮತ್ತು ಬೀದಿಯಲ್ಲಿರುವ ಶ್ರೀಸಾಮಾನ್ಯರಿಗಾಗಿ ಇನ್ನೊಂದು ನಿಯಮಾವಳಿಗಳು ಇರುವಂತಿದೆ.

ಹಣವಿಲ್ಲದೇ ಎಷ್ಟೋ ಕುಟುಂಬಗಳು ಮದುವೆಗಳನ್ನು ರದ್ದುಗೊಳಿಸಿವೆ, ಎಷ್ಟೋ ಮದುವೆಗಳು ಮುರಿದುಬಿದ್ದಿವೆ. ಆದರೆ ಬಿಜೆಪಿ ಮತ್ತು ಎನ್‌ಡಿಎ ದಿಗ್ಗಜರ ಆಶೀರ್ವಾದಗಳನ್ನು ಹೊಂದಿರುವ ರೆಡ್ಡಿ, ಶರ್ಮಾ ಮತ್ತು ಗಡ್ಕರಿ ಅವರಿಗೆ ಯಾವುದೇ ಬಿಕ್ಕಟ್ಟು ಎದುರಾಗಿಲ್ಲ. ಕಪ್ಪುಹಣದ ವಿರುದ್ಧ ನಿಮ್ಮ ಹೋರಾಟಕ್ಕಾಗಿ ಜನಸಾಮಾನ್ಯರನ್ನು ಸರದಿ ಸಾಲುಗಳಲ್ಲಿ ನಿಲ್ಲಿಸುತ್ತಿರುವ ನಿಮಗೆ ನಿಮ್ಮ ಸಚಿವರು ಇಂತಹ ಅನಾರೋಗ್ಯಕಾರಿ ಶ್ರೀಮಂತಿಕೆಯ ಪ್ರದರ್ಶನ ಮಾಡುತ್ತಿರುವುದು ನಿಮ್ಮ ನೋಟು ರದ್ದತಿ ಕ್ರಮದ ವ್ಯಂಗ್ಯ ಎಂದು ಅನ್ನಿಸುತ್ತಿಲ್ಲವೇ ಎಂದು ಶರ್ಮಾ ಮೋದಿಯವನ್ನು ಪ್ರಶ್ನಿಸಿದ್ದಾರೆ.ಈ ಅದ್ದೂರಿ ಮದುವೆಗಳ ಬಗ್ಗೆ ವಿಚಾರಣೆ ನಡೆಸುವಂತೆ ತಾನು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸುತ್ತಿದ್ದೇನೆ. ಅದರೆ ಅವರು ತನಿಖೆ ನಡೆಸುತ್ತಾರೆ ಎನ್ನುವುದು ತನಗೆ ಖಚಿತವಿಲ್ಲ.

ನಿಮ್ಮ ಕೆಲವು ಮುಖ್ಯಮಂತ್ರಿಗಳು ವಿದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವುದನ್ನು ತಾನು ಈ ಹಿಂದೆಯೇ ಗಮನಕ್ಕೆ ತಂದಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳು ಈವರೆಗೆ ಯಾವುದೇ ತನಿಖೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.ತನ್ನ ಪತ್ರದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕಾನೂನಿನ ಮೊರೆ ಹೋಗುವುದಾಗಿ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News