ಬಟ್ಟೆ ವಿನಾಯಕ ದೇವಸ್ಥಾನ ಕಳವು ಪ್ರಕರಣ
ಕದ್ದ ಮಾಲು ವಾಪಸ್ ಮಾಡಿದ ಕಳ್ಳರು ಸಾಗರ, ಡಿ.13: ತಾಲೂಕಿನ ಶರಾವತಿ ಹಿನ್ನೀರಿನ ತುಮರಿ ಸಮೀಪದ ಹಲ್ಕರೆ ಬಟ್ಟೆ ವಿನಾಯಕ ದೇವಸ್ಥಾನದ ಗರ್ಭಗುಡಿಯ ಬಾಗಿಲು ಒಡೆದು ಇತ್ತೀಚೆಗೆ ಕಳ್ಳತನ ನಡೆಸಿದ್ದ ಕಳ್ಳರು, ತಾವು ಕದ್ದೊಯ್ದ ಮಾಲನ್ನು ವಾಪಸ್ ತಂದು ದೇವಸ್ಥಾನದಲಿಯೇ ಇರಿಸಿ ಹೋದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ರಾತ್ರಿ ಹಲ್ಕರೆ ಬಟ್ಟೆ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ವರದಿ ಮಾಡಲಾಗಿತ್ತು. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಕಳ್ಳತನ ನಡೆದ ಮಾರನೆ ದಿನ(ಶನಿವಾರ) ಅರ್ಚಕರು ದೇವಸ್ಥಾನದ ಬಾಗಿಲು ತೆಗೆಯಲು ಬಂದಾಗ ಅಚ್ಚರಿ ಕಾದಿತ್ತು ಎನ್ನಲಾಗಿದೆ.
ಬೀಗ ಒಡೆದು ಕಳ್ಳತನ ಮಾಡಿಕೊಂಡು ಹೋಗಲಾಗಿದ್ದ ಬೆಳ್ಳಿಯ ಮುಖವಾಡ, ನಾಲ್ಕು ಬೆಳ್ಳಿ ವಿಗ್ರಹ, ಚಿನ್ನದ ಸರ, ಸೊಂಟದ ಪಟ್ಟಿಯನ್ನು ಚೀಲವೊಂದರಲ್ಲಿ ಕಟ್ಟಿ ತಂದು ದೇವಸ್ಥಾನದ ಗೇಟು ಒಳಗೆ ಇರಿಸಿ ಹೋಗಿದ್ದಾರೆ. ಕಳ್ಳರು ತಂದಿಟ್ಟಿದ್ದ ವಸ್ತುಗಳನ್ನು ಪೊಲೀಸರು ಮಹಜರ್ ಪ್ರಕ್ರಿಯೆ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈ ಕಳ್ಳತನದ ಹಿಂದೆ ಸ್ಥಳೀಯರ ಕೈವಾಡ ಇರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.