ರಾಯಣ್ಣ ಬ್ರಿಗೇಡ್ ಕಲಹ ತಾರಕಕ್ಕೆ
ಕಿತ್ತಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಮುಖಂಡರಿಗೆ ಸೂಚನೆ
ಬಿ. ರೇಣುಕೇಶ್
ಶಿವಮೊಗ್ಗ, ಡಿ. 13: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಮುಖಂ ಡರು ’ಗೇಮ್‌ಪ್ಲ್ಯಾನ್’ ರೂಪಿಸು ತ್ತಿದ್ದಾರೆ. ಮತ್ತೊಂದೆಡೆ ಪಕ್ಷದ ರಾಜ್ಯದ ಹಿರಿಯ ಮುಖಂಡರು ನಾನಾ ಕಾರಣಗಳಿಂದ ಕಲಹ ಮಾಡಿ ಕೊಂಡು ಪರಸ್ಪರ ದೂರು ಹೊತ್ತು ತರುತ್ತಿರುವುದು ರಾಷ್ಟ್ರೀಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ!
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವೆ ನಡೆಯುತ್ತಿರುವ ಬ್ರಿಗೇಡ್ ಕಲಹಕ್ಕೆ ಪಕ್ಷದ ವರಿಷ್ಠರು ತೀವ್ರ ಅಮಾಧಾನ ವ್ಯಕ್ತಪಡಿಸುವ ಜೊತೆಗೆ ಈ ರೀತಿಯ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಲು ರಾಜ್ಯ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ‘ಇನ್ನು ಮುಂದೆ ದೂರು ಹೊತ್ತು ದೆಹಲಿಗೆ ಬರುವ ಕೆಲಸ ಮಾಡಬೇಡಿ.
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟಿಸುವ ಕೆಲಸ ಮಾಡಿ. ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ನೀವೇ ಕುಳಿತುಕೊಂಡು ಪರಿಹರಿಸಿಕೊಳ್ಳಿ. ಪದೆ ಪದೇ ಪರಸ್ಪರ ದೂರು ತಂದರೆ ಸಾರ್ವಜನಿಕ ದೃಷ್ಟಿಯಲ್ಲಿ ಪಕ್ಷಕ್ಕೆ ತೊಂದರೆಯಾಗಲಿದೆ.
ಕಾರ್ಯಕರ್ತರಲ್ಲಿಯೂ ಗೊಂದಲ ಸೃಷ್ಟಿಯಾಗಲಿದೆ. ಇದಕ್ಕೆ ಆಸ್ಪದ ಕಲ್ಪಿಸಬೇಡಿ. ಅನಿವಾರ್ಯವಾದ ಸಂದರ್ಭಗಳಲ್ಲಿ ನಾವು ಮಧ್ಯೆಪ್ರವೇಶಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ರಾಷ್ಟ್ರೀಯ ಮುಖಂಡರು ರಾಜ್ಯ ಮುಖಂಡರಿಗೆ ಬಿಸಿ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಮುಖಂಡರ ಕಟ್ಟು ನಿಟ್ಟಿನ ಸೂಚನೆಯ ಹಿನ್ನೆಲೆಯಲ್ಲಿ, ಪ್ರಮುಖ ಮುಖಂಡರ ನಡುವೆ ಬಹಿರಂಗವಾಗಿ ನಡೆಯುತ್ತಿದ್ದ ಆರೋಪ -ಪ್ರತ್ಯಾರೋಪಗಳಿಗೆ ಬ್ರೇಕ್ ಬಿದ್ದಿದೆ. ಮಾಧ್ಯಮಗಳ ಮೂಲಕ ಪಕ್ಷದ ಮುಖಂಡರು ನೀಡುತ್ತಿದ್ದ ಹೇಳಿಕೆ -ಪ್ರತಿಹೇಳಿಕೆಗಳಿಗೂ ಕಡಿವಾಣ ಹಾಕಲಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಶಾಂತಿಮಂತ್ರ: ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನರಿತ ರಾಷ್ಟ್ರೀಯ ಮುಖಂಡರು ಪರಸ್ಪರ ಕಲಹದಲ್ಲಿ ತೊಡಗಿದ್ದ ರಾಜ್ಯ ಮುಖಂಡರಿಗೆ ಶಾಂತಿಮಂತ್ರ ಬೋಧಿಸಿದ್ದಾರೆ. ಕಿತ್ತಾಟ ಬಿಟ್ಟು ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಕಿವಿ ಹಿಂಡಿದ್ದು, ದೂರುಗಳ ಬಗ್ಗೆ ಸೂಕ್ತ ಸಮಯದಲ್ಲಿ ಕ್ರಮ ಜರಗಿಸಲಾಗುವುದು. ಇನ್ನು ದೂರು ತರುವ ಕೆಲಸ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ
ಸಂಘಪರಿವಾರದ ಅಸಮಾಧಾನ: ಸಂಧಾನಕ್ಕೆ ನಕಾರ!. ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪಅವರು ನಿರಂತರವಾಗಿ ಕಲಹದಲ್ಲಿ ತೊಡಗುತ್ತಿರುವುದಕ್ಕೆ ಸಂಘಪರಿವಾರದ ಹಿರಿಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಈ ಇಬ್ಬರು ಮುಖಂಡರ ನಡುವೆ ತಲೆದೋರಿದ್ದ ಭಿನ್ನಾಭಿಪ್ರಾಯ ಶಮನಗೊಳಿಸುವ ನಿಟ್ಟಿನಲ್ಲಿ ಸಂಘಪರಿವಾರದ ಮುಖಂಡರು ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತೆ ಈ ಇಬ್ಬರು ಮುಖಂಡರ ನಡುವೆ ವೈಮನಸ್ಸು ತಲೆದೋರಿರುವುದಕ್ಕೆ ಸಂಘಪರಿವಾರದ ಮುಖಂಡರು ಈ ಬಾರಿ ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆಗೆ ತಲೆ ಹಾಕುವುದಿಲ್ಲ. ಏನಾದರೂ ಮಾಡಿಕೊಳ್ಳಲಿ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.