‘ವಾರ್ದಾ’ ಪರಿಣಾಮ
ಮಡಿಕೇರಿ, ಡಿ.13: ತಮಿಳುನಾಡನ್ನು ತತ್ತರಗೊಳಿಸಿದ ಕೆಂಪು ಗುಲಾಬಿ ‘ವಾರ್ದಾ’ ಚಂಡಮಾರುತ ಕೊಡಗು ಜಿಲ್ಲೆಯಲ್ಲೂ ಪರಿಣಾಮ ಬೀರಿದ್ದು, ಮಂಜು ಸಹಿತ ಮಳೆಯಾಗುತ್ತಿದೆ.
ಸೋಮವಾರ ಮಧ್ಯ ರಾತ್ರಿಯಿಂದಲೇ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಮೈಕೊರೆಯುವ ಚಳಿಯೊಂದಿಗೆ ಮಂಜು ಸಹಿತ ಮಳೆ ಸುರಿಯುತ್ತಿದೆ. ಚಂಡ ಮಾರುತದ ಪರಿಣಾಮದ ಹಿನ್ನೆಲೆಯಲ್ಲಿ ಡಿ.17ರ ವರೆಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯ ಬೆಳೆಗಾರರು ಹಾಗೂ ರೈತರಲ್ಲಿ ಆತಂಕ ಎದುರಾಗಿದೆ.
ಅರೆಬಿಕಾ ಕಾಫಿ ಕೊಯ್ಲಿನ ಹಂತದಲ್ಲಿದ್ದು, ಕೆಲವು ಭಾಗಗಳಲ್ಲಿ ಕೊಯ್ಲು ಆರಂಭಗೊಂಡಿದೆ. ಈ ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಕೊಳೆಯುವ ಸಾಧ್ಯತೆಗಳಿದ್ದು, ರೋಬಸ್ಟಾ ಕಾಫಿ ನಿಗದಿತ ಸಮಯಕ್ಕಿಂತ ಬೇಗ ಹಣ್ಣಾಗಲಿದೆ.
ಭತ್ತದ ಗದ್ದೆಯಲ್ಲಿ ಫಸಲು ಹೇರಳವಾಗಿ ಇದೆಯಾದರೂ ಮಳೆಯಿಂದಾಗಿ ಕೊಯ್ಲಿಗೆ ಮತ್ತು ಒಣಗಿಸಲು ಅಡಚಣೆ ಎದುರಾಗಲಿದೆ. ಅಧಿಕ ತೇವಾಂಶದಿಂದ ಭತ್ತ ಮೊಳಕೆಯೊಡೆದು ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಜಿಲ್ಲೆಯ ಪ್ರಮುಖ ಸುಗ್ಗಿ ಹಬ್ಬ ಹುತ್ತರಿ ಆಚರಣೆಯ ಸಂಭ್ರಮಕ್ಕೂ ಅಕಾಲಿಕ ಮಳೆ ತಣ್ಣೀರೆರಚಿದೆ.