×
Ad

‘ಗೃಹರಕ್ಷಕರು ಸ್ವಯಂಪ್ರೇರಿತ ಸಮಾಜ ಪರಿವರ್ತನೆಗೆ ಪ್ರಯತ್ನಿಸಿ’

Update: 2016-12-13 23:06 IST

ದಾವಣಗೆರೆ, ಡಿ.13: ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಾಣ ಮತ್ತು ಆಸ್ತಿ ಹಾನಿ ರಕ್ಷಿಸುವ ಮುಖೇನ ಸಮಾಜ ಸೇವೆಗಷ್ಟೇ ಸೀಮಿತರಾಗದೆ, ಸ್ವಯಂ ಪ್ರೇರಿತರಾಗಿ ಸಮಾಜ ಪರಿವರ್ತಿಸುವತ್ತ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.


ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಗೃಹರಕ್ಷಕ ದಳದ ವತಿಯಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಪೊಲೀಸರು ಮತ್ತು ಗೃಹ ರಕ್ಷಕ ದಳದವರು ಸ್ವಯಂ ಪ್ರೇರಿತವಾಗಿ ದೇಶ ಸೇವೆಗಾಗಿ ಮುಂದೆ ಬಂದಿದ್ದು, ಈ ಮನಸ್ಸು ಇದ್ದರೆ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದರು.
 ಗೃಹರಕ್ಷಕರು ತುರ್ತು ಪರಿಸ್ಥಿತಿ ಸೇವೆಯ ಅಗತ್ಯತೆ ಜೊತೆಗೆ ತಾವೇ ಮನಸ್ಸು ಗಟ್ಟಿಗೊಳಿಸಿಕೊಂಡು ಪ್ರಾಣವನ್ನೇ ಮುಡಿಪಾಗಿಟ್ಟು ಸಮಾಜ ಸೇವೆಗೆ ಮುಂದಾಗುತ್ತಾರೆ. ಜೊತೆಗೆ ಕರ್ತವ್ಯ ನಿರ್ವಹಣೆಯ ಬಳಿಕ ಸರಳ ಸಾರ್ವಜನಿಕರಂತೆಯೇ ಇರುವುದು ಹೆಮ್ಮೆಯ ವಿಚಾರ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್.ಗುಳೇದ್ ಮಾತನಾಡಿ, ವಿಪತ್ತು ಮತ್ತು ಆಪತ್ತು ಬಂದ ಸಂದರ್ಭಗಳಲ್ಲಿ ರಕ್ಷಣಾ ಪರಿಹಾರ ಕಾರ್ಯಗಳಲ್ಲಿ ಪೊಲೀಸ್ ಇಲಾಖೆಗೆ ಗೃಹ ರಕ್ಷಕ ದಳದವರು ಕೈ ಜೋಡಿಸುತ್ತಿರುವುದು ಶ್ಲಾಘನೀಯ. ಇವರಿಗೆ ಸಾಮಾನ್ಯವಾಗಿ ಸಿಗಬೇಕಾದ ಅಭಿನಂದನೆ ಸಿಗುತ್ತಿಲ್ಲ ಎಂದರು.
ಸಮಾಜ ಎಷ್ಟೇ ಬದಲಾದರೂ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದವರ ಮೇಲೆ ಜವಾಬ್ದಾರಿ ಹೆಚ್ಚಿದೆ.

ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕೆಂದ ಅವರು, ಮುಂದಿನ ದಿನಗಳಲ್ಲಿ ಗೃಹ ರಕ್ಷಕ ದಳದವರಿಗೆ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಲಿ ಎಂದರು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪಅವರ ಬೆಂಬಲದಿಂದಾಗಿ ಬಿಡುಗಡೆಯಾಗಿರುವ 6 ಕೋಟಿ ರೂ. ಅನುದಾನದಲ್ಲಿ ಹರಿಹರ ತಾಲೂಕು ದೇವರ ಬೆಳಕೆರೆ ಗ್ರಾಮದಲ್ಲಿ 7 ಎಕರೆ ವಿಸ್ತೀರ್ಣದಲ್ಲಿ ಪ್ರಾದೇಶಿಕ ತರಬೇತಿ ಶಾಲೆ ಸ್ಥಾಪಿಸಲಾಗುವುದು ಎಂದರು.


ಈ ತರಬೇತಿ ಶಾಲೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ವ್ಯವಸ್ಥೆ ಇದುವರೆಗೂ ಆಗಿಲ್ಲ. ದೇವರಬೆಳಕೆರೆ ಪ್ರಾದೇಶಿಕ ತರಬೇತಿ ಶಾಲೆಗೆ ಅವಶ್ಯವಿರುವ 23 ನೂತನ ಹುದ್ದೆಗಳನ್ನು ಮಂಜೂರು ಮಾಡುವ ಪ್ರಕ್ರಿಯೆ ಸರಕಾರದ ಹಂತದಲ್ಲಿದ್ದು, ಈ ಬಗ್ಗೆ ಸರಕಾರ ಶೀಘ್ರ ಗಮನ ಹರಿಸಬೇಕು ಎಂದು ವಿನಂತಿಸಿದರು.


ಇದೇ ವೇಳೆ ಹುತಾತ್ಮ ಗೃಹ ರಕ್ಷಕ ಸಿಬ್ಬಂದಿಗೆ ಒಂದು ನಿಮಿಷಗಳ ಕಾಲ ವೌನ ಆಚರಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಜಗಳೂರು ಘಟಕ ಅಧಿಕಾರಿ ಹಾಲಪ್ಪಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಚೇರಿ ತರಬೇತಿ ಅಕಾಡಮಿಯಲ್ಲಿ ನಡೆದ ವಿವಿಧ ತರಬೇತಿಗಳಲ್ಲಿ ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದ ಎಚ್.ಮಂಜಣ್ಣ, ಗುರುಬಸಮ್ಮ, ಆಂಜಿನಪ್ಪಅವರನ್ನು ಸನ್ಮಾನಿಸಲಾಯಿತು.

ಗೃಹ ರಕ್ಷಕರು ಸಮವಸ್ತ್ರದಲ್ಲಿದ್ದಾಗ ಕೆಲ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿದ್ದ ಮನವಿಯನ್ನು ಇದೇ ವೇಳೆ ಗೃಹ ರಕ್ಷಕ ದಳ ಹಿರಿಯ ಅಧಿಕಾರಿ ಡಾ.ಬಿ.ಎಚ್.ವೀರಪ್ಪಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News