ಅಕ್ರಮ ಮರಳು ದಂಧೆ
ತೀರ್ಥಹಳ್ಳಿ, ಡಿ.13: ಇಲ್ಲಿನ ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಹುಣಸವಳ್ಳಿ ಕ್ವಾರಿಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಐವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮಂಜುನಾಥ ಎಂಬವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಹುಣಸವಳ್ಳಿಯ ಮರಳು ಕ್ವಾರೆ ಪಿಡಬ್ಲ್ಯುಡಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು,ಕಾರಣಾಂತರಗಳಿಂದ ಇಲ್ಲಿಯತನಕವೂ ಸಾರ್ವಜನಿಕರಿಗಾಗಿ ಹರಾಜು ಮಾಡಿಲ್ಲ. ಇದರ ದುರ್ಲಾಭ ಪಡೆದ ಕುರುವಳ್ಳಿಯ ಪ್ರಮೋದ, ನಾಗರಾಜ, ಸುರೇಶ, ಮಂಜುನಾಥ,ರಮೇಶ್ ಎಂಬವರು ದಿನನಿತ್ಯ ಪಿಕಪ್ ಗೂಡ್ಸ್ ವ್ಯಾನ್‌ಗಳಲ್ಲಿ 40ರಿಂದ60 ಲೋಡುಗಳವರೆಗೆ ದೋಚುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದು ತಿಂಗಳಿನಿಂದ ಸುಮಾರು 30 ಲಕ್ಷ ರೂ.ಗೂ ಹೆಚ್ಚಿನ ಪ್ರಮಾಣದ ಮರಳನ್ನು ಈ ದಂಧೆಕೋರರು ದೊಡ್ಡದೊಂದು ಜಾಲವನ್ನು ನಿರ್ಮಿಸಿಕೊಂಡು ದೋಚುತ್ತಿದ್ದರು ಎನ್ನಲಾಗಿದೆ. ಪ್ರತಿ ಲೋಡಿಗೆ ಈ ದಂಧೆಕೋರರು 300 ರೂ.ಪೊಲೀಸರು ಹಾಗೂ ಪತ್ರಕರ್ತರ ಹೆಸರಿನಲ್ಲಿ ಸಂಗ್ರಹಿಸುತ್ತಿದ್ದರು ಎಂಬುದು ಕೂಡ ಬೆಳಕಿಗೆ ಬಂದಿದೆ.
ಬಂಧಿತ ಮಂಜುನಾಥನನ್ನು ಹೊರತುಪಡಿಸಿ ಉಳಿದವರು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಮೇಲೆ ಸೆಕ್ಷನ್ 370ರಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನ ಪಡುತ್ತಿದ್ದಾರೆ.