ಮುಂಬೈ ಗಲಭೆ ಸಂದರ್ಭದಲ್ಲಿ ಕುಟುಂಬವೊಂದನ್ನು ರಕ್ಷಿಸಿದ್ದರು ಸುನಿಲ್ ಗವಾಸ್ಕರ್ !

Update: 2016-12-14 04:52 GMT

ಹೊಸದಿಲ್ಲಿ, ಡಿ.14: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್‌ನಲ್ಲಿ ದಂತಕಥೆ ಎನಿಸಿದ ಸುನಿಲ್ ಗವಾಸ್ಕರ್ ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿ. ವೇಗದ ಬೌಲರ್‌ಗಳ ಬೆಂಕಿ ಚೆಂಡಿಗೆ ಕೂಡಾ ಹೆಲ್ಮೆಟ್ ಧರಿಸದೇ ಬ್ಯಾಟಿಂಗ್ ಮಾಡುವ ಛಾತಿ ಹೊಂದಿದ್ದ ಲಿಟ್ಲ್‌ಮಾಸ್ಟರ್, ವಿಶ್ವದಲ್ಲಿ 10 ಸಾವಿರ ರನ್ ಮೈಲುಗಲ್ಲು ದಾಟಿದ ಮೊಟ್ಟಮೊದಲ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. 1987ರಲ್ಲಿ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದ ಇವರು, 1993ರಲ್ಲಿ ನಡೆದ ಮುಂಬೈ ಗಲಭೆ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು, ಒಂದು ಕುಟುಂಬವನ್ನು ರಕ್ಷಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಈ ಘಟನೆಯನ್ನು ಬಿಚ್ಚಿಟ್ಟದ್ದು ಸ್ವತಃ ಅವರ ಮಗ ರೋಹನ್ ಗವಾಸ್ಕರ್. "ಈ ಘಟನೆ ಕುಟುಂಬವನ್ನು ರಕ್ಷಿಸಿದ್ದು ಮಾತ್ರವಲ್ಲದೇ, ನನ್ನ ಸ್ವಂತ ಬದುಕಿಗೂ ದೊಡ್ಡ ಪಾಠವಾಯಿತು" ಎಂದು ಅವರು ಬಣ್ಣಿಸಿದ್ದಾರೆ. "ಬಾಂಬ್‌ ಸ್ಫೋಟ ನಡೆದ ಕೆಲ ದಿನಗಳ ಬಳಿಕ ನಾವು ಟೆರೇಸ್ ಮೇಲೆ ನಿಂತಿದ್ದೆವು. ಒಂದು ಉದ್ರಿಕ್ತರ ಗುಂಪು ಒಂದು ಕುಟುಂಬವನ್ನು ಸುತ್ತುವರಿದಿತ್ತು. ಇದನ್ನು ತಂದೆ ನೋಡಿದರು. ತಕ್ಷಣಕ್ಕೆ ಕೆಳಕ್ಕೆ ಓಡಿ, ಉದ್ರಿಕ್ತರ ಗುಂಪನ್ನು ಧೈರ್ಯದಿಂದ ಎದುರಿಸಿದರು. ಆ ಕುಟುಂಬಕ್ಕೆ ಏನು ಮಾಡಬೇಕು ಎಂದುಕೊಂಡಿದ್ದೀರೋ ಮೊದಲು ನನಗೆ ಅದನ್ನು ಮಾಡಿ ಎಂದು ತಂದೆ ಸಾಹಸದಿಂದ ಆ ಗುಂಪನ್ನು ಎದುರಿಸಿದರು" ಎಂದು ವಿವರ ನೀಡಿದ್ದಾರೆ.

"ಬಳಿಕ ಪರಿಸ್ಥಿತಿ ತಿಳಿಯಾಯಿತು. ಕುಟುಂಬ ಬೇರೆಡೆಗೆ ತೆರಳಲು ಅವಕಾಶವಾಯಿತು. ಅಂಥ ಉದ್ರಿಕ್ತ ಗುಂಪಿನ ಮುಂದೆ ಸಂಘರ್ಷಕ್ಕೆ ಇಳಿಯುವುದು ನಿಜಕ್ಕೂ ಸಾಹಸವೇ ಸರಿ" ಎಂದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News