ಜ.15ರೊಳಗೆ ಸರಕಾರದ ಕೈ ಸೇರಲಿದೆ ಹೊಸ ಪಠ್ಯಕ್ರಮ
ಬೆಂಗಳೂರು, ಡಿ. 14: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ತಜ್ಞರ ಸಮಿತಿ ಪರಿಷ್ಕರಿಸಿರುವ 1 ರಿಂದ 10ನೆ ತರಗತಿವರೆಗಿನ ಹೊಸ ಪಠ್ಯ ಪುಸ್ತಕವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅಳವಡಿಸಿಕೊಳ್ಳಲು ಸರಕಾರ ಅಸ್ತು ಎಂದಿದೆ.
ಸರಕಾರವೇ ರಚಿಸಿದ್ದ 27 ವಿವಿಧ ಭಾಷೆಗಳ ತಜ್ಞರು ಒಳಗೊಂಡಿದ್ದ ಸಮಿತಿ ಪರಿಷ್ಕರಿಸಿದ ಪಠ್ಯ ಕ್ರಮವನ್ನು 2018-19ರ ಶೈಕ್ಷಣಿಕ ವರ್ಷದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್‌ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬರಗೂರು ರಾಮಚಂದ್ರಪ್ಪ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯಪುಸ್ತಕವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್‌ರೊಂದಿಗೆ ಚರ್ಚೆ ನಡೆಸಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯಕ್ರಮವನ್ನು ಅಳವಡಿಸಲು ಸೂಚನೆ ನೀಡಿದ್ದಾರೆ.
ಈ ಮೂಲಕ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ತಜ್ಞರ ಸಮಿತಿ ಪರಿಷ್ಕರಿಸಿದ್ದ 1 ರಿಂದ 10ನೆ ತರಗತಿವರೆಗಿನ ಪಠ್ಯ ಪುಸ್ತಕಗಳ ಅಳವಡಿಸಿಕೊಳ್ಳುವ ಬಗ್ಗೆ ಇದ್ದ ಗೊಂದಲಗಳಿಗೆ ಕಡೆಗೂ ತೆರೆ ಬಿದ್ದಿದೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪಮಾತನಾಡಿ, ಇನ್ನೂ ಸರಕಾರಕ್ಕೆ ವರದಿ ಕೊಟ್ಟಿಲ್ಲ. ಹಾಗಾಗಿ ತಡವಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರು ಹೇಳಿದ್ದಾರೆ. 27 ವಿಷಯಗಳ ತಜ್ಞರ ಸಮಿತಿಯನ್ನು ರಚಿಸಿ ಪಠ್ಯ ಪುಸ್ತಕದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ್ದು, ಅದರಂತೆ ಸಮಿತಿ ವಿಜ್ಞಾನಿಗಳು, ಗಣಿತಜ್ಞರು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಹೋರಾಟಗಾರರು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಲಾಗಿದೆ ಎಂದರು.
ಜ.15ರೊಳಗೆ ಪಠ್ಯಪುಸ್ತಕ ಸಲ್ಲಿಕೆ: ಈಗ ಪರಿಷ್ಕರಿಸುವ ಪಠ್ಯ ಪುಸ್ತಕ ಯಾವುದೇ ಕೇಂದ್ರೀಯ ಪಠ್ಯ ಕ್ರಮದ ಗುಣಮಟ್ಟಕ್ಕಿಂತ ಕಡಿಮೆ ಇಲ್ಲದಂತೆ ಸಿದ್ಧಗೊಳಿಸಲಾಗಿದೆ. ನೂತನ ಪಠ್ಯಕ್ರಮ ಡಿಟಿಪಿ ಹಂತದಲ್ಲಿದ್ದು, ಪಠ್ಯ ಪುಸ್ತಕಗಳು ಜ.15ರೊಳಗೆ ಸರಕಾರದ ಕೈ ಸೇರಲಿವೆ ಎಂದು ಸ್ಪಷ್ಟಪಡಿಸಿದರು.
ಭಾಷಾ ವಿಷಯದ ಪಠ್ಯ ಪುಸ್ತಕಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ಹಾಗೂ ಇನ್ನುಳಿದ ಪಠ್ಯ ಪುಸ್ತಕವನ್ನು ಜ.15 ರೊಳಗೆ ಸರಕಾರಕ್ಕೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. 170 ದಿನಗಳಲ್ಲಿ ತಜ್ಞರ ಸಮಿತಿ ಪರಿಷ್ಕರಿಸಿರುವ ಪಠ್ಯ ಪುಸ್ತಕವನ್ನು 2018-19 ರಿಂದ ಅಳವಡಿಸಿಕೊಂಡರೆ ನಮ್ಮೆಲ್ಲ ಶ್ರಮ ವ್ಯರ್ಥವಾಗಲಿದೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.