3,000ಕ್ಕೂ ಅಧಿಕ ಆದಿವಾಸಿಗಳ ಮನೆಗಳನ್ನು ಧ್ವಂಸಗೊಳಿಸಿದ ಪೊಲೀಸ್,ಅರಣ್ಯ ಇಲಾಖೆ
ಮಡಿಕೇರಿ,ಡಿ.15: ಡಿ.7ರಂದು ನಸುಕಿನ 4.30ರ ಸುಮಾರಿಗೆ ಸವಿನಿದ್ರೆಯಲ್ಲಿದ್ದ ವಿರಾಜಪೇಟೆ ತಾಲೂಕಿನ ಬಿದ್ದಳ್ಳಿ ಮತ್ತು ತಟ್ಟಳ್ಳಿ ಗ್ರಾಮಗಳ 3,000ಕ್ಕೂ ಅಧಿಕ ಆದಿವಾಸಿಗಳು ಜೆಸಿಬಿ ಯಂತ್ರಗಳ ಸದ್ದಿಗೆ ಎಚ್ಚರಗೊಂಡಿದ್ದರು. ಬೆದರಿದ ಅವರು ಹೊರಗೆ ಬಂದಾಗ ಕೆಲವೇ ಗಂಟೆಗಳಲ್ಲಿ ಆ ದೈತ್ಯಯಂತ್ರಗಳು ಅವರ ಕಣ್ಣುಗಳೆದುರಿಗೇ ಅವರ ಗುಡಿಸಲುಗಳನ್ನು ನೆಲಸಮಗೊಳಿಸಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರು ನಮಗೆ ಯಾವುದೇ ನೋಟಿಸನ್ನು ನೀಡಿರಲಿಲ್ಲ. ಯಂತ್ರಗಳ ಸದ್ದು ಕೇಳಿದ ತಕ್ಷಣ ನಾವು ಹೊರಕ್ಕೆ ಬಂದಿರದಿದ್ದರೆ ಮತ್ತು ಮಕ್ಕಳನ್ನು ಹೊರಗೆಳೆದು ತಂದಿರದಿದ್ದರೆ ಆ ಮಕ್ಕಳು ಇಂದಿಲ್ಲಿ ನಮ್ಮ ಜೊತೆಯಿರುತ್ತಿರಲಿಲ್ಲ ಎಂದು ಮನೆಯನ್ನು ಕಳದುಕೊಂಡಿರುವ 29ರ ಹರೆಯದ ಆದಿವಾಸಿ ಮಂಜು ಜೆ.ಎ.ಹೇಳಿದರು.
ಜೇನುಕುರುಬ,ಬೆಟ್ಟಕುರುಬ,ಶೋಲಿಯ,ಯೆರವ ಮತ್ತು ಪಾಣಿಯ ಬುಡಕಟ್ಟು ಜನಾಂಗಗಳಿಗೆ ಸೇರಿದ ಸುಮಾರು 578 ಆದಿವಾಸಿಗಳು 2016,ಜೂನ್‌ನಿಂದ ಈ ಗ್ರಾಮಗಳ ಕಾಫಿ ಎಸ್ಟೇಟ್‌ಗಳ ಸಮೀಪದ ಎರಡೂವರೆ ಎಕರೆ ವಿಸ್ತೀರ್ಣದ ನಿವೇಶನದಲ್ಲಿ ತಲೆಯ ಮೇಲೆ ಸೂರು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದರು.
ಎರಡು ಯಂತ್ರಗಳು ನೆಲಸಮ ಕಾರ್ಯವನ್ನು ಆರಂಭಿಸಿದಾಗ ಸುಮಾರು 300 ಸಿಬ್ಬಂದಿಗಳು ಹಾಜರಿದ್ದರು. ನಮ್ಮ ಹೆಂಗಸರು ಮತ್ತು ಮಕ್ಕಳನ್ನು ಕರೆದೊಯ್ಯುವರೆಗೆ ಕಾಯುವಂತೆ ನಾವು ಅವರನ್ನು ಬೇಡಿಕೊಂಡಿದ್ದೆವು. ಆದರೆ ಅವರು ರಾಕ್ಷಸರಂತೆ ವರ್ತಿಸಿದ್ದರು. ನಾವು ಜೀವದ ಹಂಗು ಮರೆತು ನಮ್ಮ ಕುಟುಂಬಗಳನ್ನು ಹಟ್ಟಿಗಳಿಂದ ಹೊರಗೆಳೆದುತಂದು ಅವರನ್ನು ಉಳಿಸಿಕೊಂಡಿದ್ದೇವೆ ಎಂದು ಆದಿವಾಸಿಗಳ ನಾಯಕರಲ್ಲೊಬ್ಬರಾದ ಅಪ್ಪಾಜಿ ಹೇಳಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಆರಂಭದಲ್ಲಿ ತಮ್ಮನ್ನು ಬೆಂಬಲಿಸಿದ್ದರು ಮತ್ತು ಇಲ್ಲಿ ನೆಲೆಸಲು ಅವಕಾಶ ನೀಡಿದ್ದರು ಎಂದು ಕೆಲವು ಆದಿವಾಸಿಗಳು ತಿಳಿಸಿದರು.
ಕಾಫಿ ಎಸ್ಟೇಟ್‌ಗಳಲ್ಲಿ ಮಾಲಕರೊಂದಿಗೆ ವಾಸಿಸದಿರಲು ನಾವು ನಿರ್ಧರಿಸಿದಾಗ ಇದೆಲ್ಲ ಆರಂಭಗೊಂಡಿತ್ತು. ಅವರು ನಮಗೆ ಹೊಟ್ಟೆಗೆ ಕೂಳು ಮತ್ತು ತಲೆಯ ಮೇಲೊಂದು ಸೂರನ್ನಷ್ಟೇ ನೀಡಿದ್ದರು. ನಮಗೆ ಸಂಬಳ ನೀಡುತ್ತಿರಲಿಲ್ಲ. ನಾವು ಸ್ವತಂತ್ರವಾಗಿ ಬದುಕಿ ಹಣವನ್ನು ಸಂಪಾದಿಸಲು ಬಯಸಿದ್ದೆವು. ಹೀಗಾಗಿ ನಾವೆಲ್ಲ ಎಸ್ಟೇಟ್‌ಗಳಿಂದ ಹೊರಗೆ ಬಂದಿದ್ದೆವು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೂ ನಮಗೆ ಇಲ್ಲಿ ವಾಸವಾಗಿರಲು ಅವಕಾಶ ನೀಡಿದ್ದರು ಎಂದು ಅಪ್ಪಾಜಿ ಹೇಳಿದರು.
ನಾವು ಕಾಫಿ ಎಸ್ಟೇಟ್‌ಗಳಲ್ಲಿ ದುಡಿಯುವುದನ್ನು ನಿಲ್ಲಿಸಿದ್ದರಿಂದ ಮಾಲಕರು ಪೊಲೀಸರೊಂದಿಗೆ ಶಾಮೀಲಾಗಿ ನಮ್ಮ ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಆದಿವಾಸಿಗಳು ಆರೋಪಿಸಿದ್ದಾರೆ.
ನೆಲಸಮ ಕಾರ್ಯಾಚರಣೆ ಸಂದರ್ಭ ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಆದಿವಾಸಿಗಳನ್ನು ಪೊಲೀಸರು ಬಂಧಿಸಿದ್ದರು. ಕೆಲವು ಹೆಂಗಸರು ಪೊಲೀಸರು ತಮ್ಮ ಮೈ ಮುಟ್ಟದಿರಲೆಂದು ಬಟ್ಟೆಗಳನ್ನೂ ಕಳಚಿದ್ದರು. ಆದರೆ ಪೊಲೀಸರು ಯಾವುದೇ ಮರು ಕ ತೋರದೇ ಎಲ್ಲರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಂಧಿರತನ್ನು ಎರಡು ದಿನಗಳ ಕಾಲ ಠಾಣೆಯಲ್ಲಿಟ್ಟುಕೊಂಡು ಬಳಿಕ ಜಾಮೀನಿನಲ್ಲಿ ಬಿಟ್ಟಿದ್ದಾರೆ ಎಂದು ಆದಿವಾಸಿಗಳಿಗೆ ನೆರವಾಗುತ್ತಿರುವ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಹೇಳಿದರು.
ಇದೀಗ ಈ ನತದೃಷ್ಟ ಆದಿವಾಸಿಗಳು ಸಿಬಿ ಹಳ್ಳಿಯ ಆಶ್ರಮ ಶಾಲೆಯ ಹೊರಗಿನ ಮೈದಾನದಲ್ಲಿ ದಿನಗಳನ್ನು ದೂಡುತ್ತ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ 2008,ಜ.1ರಿಂದ ಜಾರಿಗೆ ಬಂದಿರುವ ಕಾಯ್ದೆಯಂತೆ ಸರಕಾರವು ಪ್ರತಿಯೊಬ್ಬ ವಯಸ್ಕ ಆದಿವಾಸಿಗೆ ಜೀವನೋಪಾಯಕ್ಕಾಗಿ ಎರಡೂವರೆ ಎಕರೆ ಜಮೀನನ್ನು ನೀಡಬೇಕು. ಆದರೆ ಅವರಿಗೆ ಈವರೆಗೂ ಒಂದು ಇಂಚೂ ಭೂಮಿಯನ್ನು ನೀಡಲಾಗಿಲ್ಲ. ಅವರು ನೀರು-ಆಹಾರಕ್ಕಾಗಿ ಪರದಾಡುತ್ತಿದ್ದಾರೆ, ಆದರೂ ಪ್ರತಿಭಟನೆ ನಿಲ್ಲಿಸಿಲ್ಲ ಎಂದು ಭೂಮಿ ಮತ್ತು ವಸತಿ ವಂಚಿತರ ಸಮಿತಿ ಸದಸ್ಯೆ ಪದ್ಮಾ ಎಸ್.ಜೆ.ಹೇಳಿದರು.
ಆದಿವಾಸಿಗಳೆಂದು ಹೇಳಿಕೊಳ್ಳುತ್ತಿರುವವರು ಅಸ್ಸಾಂ ಮತ್ತು ಪಾಕಿಸ್ತಾನಗಳಿಂದ ಬಂದವರಾಗಿದ್ದು,ಅವರ್ಯಾರೂ ಬುಡಕಟ್ಟು ಸಮುದಾಯದವರಲ್ಲ, ಹೀಗಾಗಿ ಅವರ ಮನೆಗಳನ್ನು ನೆಲಸಮಗೊಳಿಸಿದ್ದೇವೆ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ ಎಂದು ಪದ್ಮಾ ತಿಳಿಸಿದರು.