×
Ad

ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿ ಹಸ್ತಾಂತರ

Update: 2016-12-16 23:14 IST

ನಿರ್ಮಿತಿ ಕೇಂದ್ರಕ್ಕೆ 2 ಕಾಮಗಾರಿಗಳು ಹಸ್ತಾಂತರ
ಕಾರ್ಪೊರೇಟರ್‌ಗಳ ಅಸಮಾಧಾನ

  ಬಿ. ರೇಣುಕೇಶ್
 ಶಿವಮೊಗ್ಗ, ಡಿ. 16: ಕೋಟ್ಯಂತರ ರೂ. ಮೊತ್ತದ ಎರಡು ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ, ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸುವ ಶಿವಮೊಗ್ಗ ಮಹಾನಗರ ಪಾಲಿಕೆಯ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಾಲಿಕೆಯ ಈ ನಿರ್ಧಾರಕ್ಕೆ ಸ್ವತಃ ಕೆಲ ಕಾರ್ಪೊರೇಟರ್‌ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯ ಮೂಲಕ ಕಾಮಗಾರಿ ನಿರ್ವಹಣೆಯ ಕೆಲಸ ಹಸ್ತಾಂತರಿಸಿದ್ದರೆ ಪಾಲಿಕೆಗೆ ಆರ್ಥಿಕವಾಗಿ ಅನುಕೂಲವಾಗುತ್ತಿತ್ತು. ಕಾಮಗಾರಿ ಪಡೆಯಲು ಗುತ್ತಿಗೆದಾರರ ನಡುವೆ ಪೈಪೋಟಿ ಏರ್ಪಡುತ್ತಿದ್ದ ಕಾರಣದಿಂದ, ಕಾಮಗಾರಿಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ದರಕ್ಕೆ ಕೆಲಸ ನಿರ್ವಹಿಸುತ್ತಿದ್ದರು.

ಇದರಿಂದ ಪಾಲಿಕೆಗೆ ಸರಿಸುಮಾರು ಕೋಟಿ ರೂ. ಮೊತ್ತವಾದರೂ ಉಳಿತಾಯವಾಗುತ್ತಿತ್ತು. ಆದರೆ ಟೆಂಡರ್‌ಗೆ ಬದಲಾಗಿ ನಿರ್ಮಿತಿ ಕೇಂದ್ರಕ್ಕೆ ನೇರವಾಗಿ ಸರಿಸುಮಾರು 9 ಕೋಟಿ ರೂ. ಮೊತ್ತದ ಎರಡು ಕಾಮಗಾರಿಗಳನ್ನು ಹಸ್ತಾಂತರಿಸಿರುವುದರಿಂದ ಹಣ ಉಳಿತಾಯವಾಗುವುದಿರಲಿ, ಅನಿವಾರ್ಯವಾದರೆ ಪಾಲಿಕೆಯೇ ಶೇ.10ರಷ್ಟು ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ ಎಂಬುದು ಕೆಲ ಕಾರ್ಪೊರೇಟರ್‌ಗಳ ಆರೋಪವಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ, ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಪಾಲಿಕೆಯ ಯಾವುದೇ ಕಾಮಗಾರಿ ನೀಡದಂತೆ ಪಾಲಿಕೆಯ ಸಾಮಾನ್ಯ ಸಭೆೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಈ ನಡುವೆ ತಾನೇ ಕೈಗೊಂಡ ನಿರ್ಣಯಕ್ಕೆ ವಿರುದ್ಧವಾಗಿ ಪಾಲಿಕೆ ಆಡಳಿತವು ನಿರ್ಮಿತಿ ಕೇಂದ್ರಕ್ಕೆ ಬಹುಕೋಟಿ ರೂ. ಮೊತ್ತದ ಕಾಮಗಾರಿಗಳ ನಿರ್ವಹಣೆಯ ಜವಾಬ್ದಾರಿ ಹಸ್ತಾಂತರಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮತ್ತೊಂದೆಡೆ ಇತ್ತೀಚೆಗೆ ನಡೆದ ಪಾಲಿಕೆಯ ಸಾಮಾನ್ಯ ಸಭೆೆಯಲ್ಲಿಯೂ ಈ ವಿಷಯ ಚರ್ಚೆಯಾಗಿದ್ದು, ಕೆಲ ಕಾರ್ಪೊರೇಟರ್‌ಗಳು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಗಳನ್ನು ನೀಡುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದ್ದಾರೆ. ಕಾಮಗಾರಿಗಳ ವಿವರ: ನಗ ರೋತ್ಥಾನ ಯೋಜನೆಯ 3ನೆಯ ಹಂತದಲ್ಲಿ ಸಿದ್ದೇಶ್ವರ ನಗರದಲ್ಲಿ ಪೌರ ಕಾರ್ಮಿಕರ ಕಲ್ಯಾಣ ಭವನ ಕಟ್ಟಡ ನಿರ್ಮಾಣಕ್ಕೆ 3.54 ಕೋಟಿ ರೂ. ಹಾಗೂ ಗಾರ್ಡನ್ ಏರಿಯಾದಲ್ಲಿ ಹೂ, ಹಣ್ಣು, ತರಕಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 5.63 ಕೋಟಿ ರೂ. ಮೊತ್ತ ಮೀಸಲಿಡಲಾಗಿದೆ.

ಈಗಾಗಲೇ ಈ ಎರಡು ಕಟ್ಟಡಗಳ ನಿರ್ಮಾಣಕ್ಕೆ ಮುಂಚಿತವಾಗಿ ಕೈಗೊಳ್ಳಬೇಕಾಗಿದ್ದ ಎಲ್ಲ ರೀತಿಯ ಪೂರ್ವಭಾವಿ ಆಡಳಿತಾತ್ಮಕ ಅನುಮೋದನೆಯನ್ನು ಪಾಲಿಕೆ ಆಡಳಿತ ಪ
ಡೆದುಕೊಂಡಿದೆ. ಭಾರೀ ಮೊತ್ತದ ಕಾಮಗಾರಿಗಳಾಗಿದ್ದರಿಂದ ಬಹುತೇಕ ಇ-ಪ್ರಕ್ಯೂರ್‌ಮೆಂಟ್ ಮೂಲಕ ಕಾಮಗಾರಿ ನಿರ್ವಹಿಸಲು ಅರ್ಹ ಗುತ್ತಿಗೆದಾರರಿಂದ ಅರ್ಜಿ ಆಹ್ವಾನಿಸುವ ನಿರೀಕ್ಷೆಯಿತ್ತು. ಆದರೆ ಮಹಾನಗರ ಪಾಲಿಕೆ ಆಡಳಿತವು ಏಕಾಏಕಿ ಟೆಂಡರ್ ಪ್ರಕ್ರಿಯೆ ನಡೆಸುವ ತೀರ್ಮಾನದಿಂದ ಹಿಂದೆ ಸರಿದು, ನಿರ್ಮಿತಿ ಕೇಂದ್ರಕ್ಕೆ ಎರಡು ಕಾಮಗಾರಿಗಳ ಜವಾಬ್ದಾರಿ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
 ಕೆಲ ಸಂದಭರ್ಗಳಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ನಿರ್ಮಿತಿ, ಕೆಆರ್‌ಐಡಿಎಲ್ ಸಂಸ್ಥೆಗಳ ಮೂಲಕ ನಡೆಸಲು ಸ್ಥಳಿಯಾಡಳಿತಗಳಿಗೆ ಅವಕಾಶವಿದೆ.

ಆದರೆ ಬಹುತೇಕ ಸ್ಥಳಿಯಾಡಳಿತಗಳು ಭಾರೀ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕವೇ ಗುತ್ತಿಗೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸುತ್ತವೆ. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಕೋಟ್ಯಂತರ ರೂ. ಮೊತ್ತದ ಎರಡು ಕಾಮಗಾರಿಗಳನ್ನು, ಟೆಂಡರ್ ಪ್ರಕ್ರಿಯೆ ನಡೆಸದೆ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮತ್ತೊಂದೆಡೆ ಪಾಲಿಕೆಯ ಈ ನಿರ್ಣಯದ ವಿರುದ್ದ ಕೆಲ ಕಾರ್ಪೊರೇಟರ್‌ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇ-ಟೆಂಡರ್ ಮೂಲಕವೇ ಕಾಮಗಾರಿ ಗುತ್ತಿಗೆ ಹಂಚಿಕೆ ಮಾಡಬೇಕು. ನಿರ್ಮಿತಿ ಕೇಂದ್ರಕ್ಕೆ ನೀಡಿರುವುದನ್ನು ರದ್ದುಪಡಿಸಲು ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಭಾರೀ ಮೊತ್ತದ ಎರಡು ಕಾಮಗಾರಿಗಳನ್ನು ನೇರವಾಗಿ ನಿರ್ಮಿತಿ ಕೇಂದ್ರಕ್ಕೆ ನೀಡಲು ಮುಂದಾಗಿರುವ ಮಹಾನಗರ ಪಾಲಿಕೆ ಆಡಳಿತದ ನಿರ್ಧಾರ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದರ ಹಿಂದೆ ’ಗುಪ್ತ ವ್ಯವಹಾರ’ದ ಅನುಮಾನಗಳು ವ್ಯಕ್ತವಾಗುತ್ತಿವೆ.

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದು ಕೊಳ್ಳಲು, ಪಾರದರ್ಶಕತೆ ಕಾಪಾ ಡಲು, ಭ್ರಷ್ಟಾಚಾರ, ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಎಲ್ಲ ಕಾಮಗಾ ರಿಗಳನ್ನು ಇ-ಪ್ರಕ್ಯೂರ್‌ಮೆಂಟ್ ಮೂಲಕ ಗುತ್ತಿಗೆದಾರರಿಗೆ ಆಯ್ಕೆ ಮಾಡುವುದು ಕಡ್ಡಾಯವಾಗಿದೆ.
ದೂರು ನೀಡಲು ನಿರ್ಧಾರ...?
ಭಾರೀ ಮೊತ್ತದ ಕಾಮಗಾರಿಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ಹಾಗೂ ಕೆಆರ್‌ಐಡಿಎಲ್ ಸಂಸ್ಥೆಗಳಿಗೆ ನೀಡದಂತೆ ಪೌರಾಡಳಿತ ನಿರ್ದೇಶ ನಾಲಯವು ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ನಿರಂತರ ವಾಗಿ ಸೂಚನೆ ನೀಡುತ್ತಿರುತ್ತದೆ. ಇದೆಲ್ಲದರ ಹೊರತಾಗಿಯೂ ಮಹಾನಗರ ಪಾಲಿಕೆ ಆಡಳಿತವು ಸರಿಸುಮಾರು 9 ಕೋಟಿ ರೂ. ಮೊತ್ತದ ಎರಡು ಕಾಮಗಾರಿಗಳನ್ನು ನಿಮಿತಿರ್ ಕೇಂದ್ರಕ್ಕೆ ನೀಡಿದೆ. ಇದನ್ನು ರದ್ದುಪಡಿಸುವಂತೆ ಆಗ್ರಹಿಸಿ ಕೆಲ ಕಾರ್ಪೊರೇಟರ್‌ಗಳು ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News