×
Ad

ಹಳೆಯ ಪ್ರಕ್ರಿಯೆಯಂತೆ ಎಪಿಎಂಸಿ ಚುನಾವಣೆ ನಡೆಸಲು ‘ಹೈ’ ಸೂಚನೆ

Update: 2016-12-16 23:17 IST

ಶಿವಮೊಗ್ಗ, ಡಿ. 16: ಶಿವಮೊಗ್ಗ ಜಿಲ್ಲೆಯಲ್ಲಿ ಎಪಿಎಂಸಿ ಚುನಾವಣೆಯನ್ನು ಹಳೆಯ ಪ್ರಕ್ರಿಯೆಯಂತೆ ಮುಂದುವರಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದು, ಇದು ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರಿಗೆ ಸಹಕಾರಿಯಾಗಿ ಪರಿಣಮಿಸಿದೆ. ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಎಪಿಎಂಸಿ ಚುನಾವಣಾ ಪ್ರಕ್ರಿಯೆ ಆರಂಭಿಸಲಾಗಿತ್ತು. ತದನಂತರ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸದಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸಬಾರದು.

ಎಲ್ಲಿಗೆ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತೋ, ಅಲ್ಲಿಂದಲೇ ಪುನರಾರಂಭಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೆ.ಪಿ.ದುಗ್ಗಪ್ಪಗೌಡ ಮತ್ತು ಡಿ.ವಿ.ವೆಂಕಟೇಶ್ ಎಂಬವರು ಇತ್ತೀಚೆಗೆ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಲ್. ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠವು, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದಂತೆ ಈ ಮೊದಲು ಆರಂಭಿಸಿದ್ದ ಚುನಾವಣಾ ಪ್ರಕ್ರಿಯೆಯನ್ನೇ ಮುಂದುವರಿಸಿಕೊಂಡು ಹೋಗುವಂತೆ ಸರಕಾರಕ್ಕೆ ಆದೇಶ ಹೊರಡಿಸಿದ್ದು, ಇದರಿಂದ ಹೊಸದಾಗಿ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲದಂತಾಗಿದೆ. ಆರಂಭಿಸಲಾಗಿತ್ತು: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಎಪಿಎಂಸಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.

ವೇಳಾಪಟ್ಟಿ ಕೂಡ ಪ್ರಕಟಿಸಲಾಗಿತ್ತು. ಅದರಂತೆ ಹಲವು ಸ್ಪರ್ಧಾಕಾಂಕ್ಷಿಗಳು ನಿಯಾಮನುಸಾರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆ ಕೂಡ ಪೂರ್ಣಗೊಂಡಿತ್ತು. ಅಷ್ಟರಲ್ಲಿಯೇ ರಾಜ್ಯ ಸರಕಾರವು ಬೆಳಗಾವಿ ಅಧಿವೇಶನ, ಬರಗಾಲ ಪರಿಸ್ಥಿತಿ ಮತ್ತಿತರ ಕಾರಣ ಮುಂದಿಟ್ಟು ರಾಜ್ಯದ ವಿವಿಧೆಡೆ ನಡೆಯಬೇಕಾಗಿದ್ದ ಎಪಿಎಂಸಿ ಚುನಾವಣಾ ಪ್ರಕ್ರಿಯೆಯನ್ನು ಅರ್ದಕ್ಕೆ ಸ್ಥಗಿತಗೊಳಿಸಿತ್ತು. ಸರಕಾರದ ನಿರ್ಧಾರದ ವಿರುದ್ಧ್ದ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಜ.21 ರೊಳಗೆ ಚುನಾವಣೆ ನಡೆಸುವುದಾಗಿ ಸರಕಾರ ಹೇಳಿತ್ತು. ಅರ್ಜಿ ಸಲ್ಲಿಕೆ: ಅದರಂತೆ ಇದೀಗ ಮತ್ತೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಮೊದಲು ಸಲ್ಲಿಸಿದ್ದ ನಾಮಪತ್ರಗಳು ಊರ್ಜಿತವಾಗುವುದಿಲ್ಲ. ಮತ್ತೆ ಹೊಸದಾಗಿ ಉಮೇದುವಾರಿಕೆ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಇದರಿಂದ ಸ್ಪರ್ಧಾಕಾಂಕ್ಷಿಗಳಿಗೆ ತೊಂದರೆಯಾಗಲಿದೆ. ಈ ಹಿಂದೆ ಎಲ್ಲಿಗೆ ನಿಲ್ಲಿಸಲಾಗಿತ್ತೋ ಅಲ್ಲಿಂದಲೇ ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಇಬ್ಬರು ಅರ್ಜಿದಾರರು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಹೈಕೋರ್ಟ್ ಸಹಮತ ವ್ಯಕ್ತಪಡಿಸಿ, ಸಹಕಾರಿ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿನ ಎಪಿಎಂಸಿಗಳ ಚುನಾವಣೆಗೆ ಹೊಸ ವೇಳಾಪಟ್ಟಿಯಂತೆ ಚುನಾವಣೆ ನಡೆಯದಿರುವ ಸಾಧ್ಯತೆ ದಟ್ಟವಾಗಿದೆ.
  ‘ಸರಕಾರದ ಸೂಚನೆಯಂತೆ ಚುನಾವಣೆ’ಹೈಕೋರ್ಟ್ ಏಕ ಸದಸ್ಯ ಪೀಠವು ಹಳೆಯ ಪ್ರಕ್ರಿಯೆ ಯಂತೆ ಶಿವಮೊಗ್ಗ ಎಪಿಎಂಸಿ ಚುನಾವಣೆ ನಡೆಸುವಂತೆ ಗುರುವಾರ ಆದೇಶ ಹೊರಡಿಸಿದೆ. ಈ ಆದೇಶದ ಬಗ್ಗೆ ಅಧಿಕೃತ ಆದೇಶ ಜಿಲ್ಲಾಡಳಿತಕ್ಕೆ ಇಲ್ಲಿಯವರೆಗೂ ತಲುಪದ ಕಾರಣ ಸರಕಾರದ ಸೂಚನೆಯಂತೆ ಡಿ. 16 ರಿಂದಲೇ ಜಿಲ್ಲೆಯ ಏಳು ಎಪಿಎಂಸಿಗಳಿಗೆ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಜಿಲ್ಲಾಡಳಿತ ಪ್ರಕಟಿಸಲು ನಿರ್ಧರಿಸಿದೆ. ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಮಾತನಾಡಿದರು. ರಾಜ್ಯ ಸರಕಾರದ ಸೂಚನೆಯಂತೆ ಡಿ.16 ರಂದು ಜಿಲ್ಲೆಯ ಎಪಿಎಂಸಿಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಏಕ ಸದಸ್ಯ ಪೀಠವು ಈ ಹಿಂದೆ ಆರಂಭಿಸಲಾಗಿದ್ದ ಚುನಾವಣಾ ಪ್ರಕ್ರಿಯೆಯನ್ನೇ ಮುಂದುವರಿಸುವಂತೆ ಆದೇಶ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಇಲ್ಲಿಯವರೆಗೂ ಹೈಕೋರ್ಟ್ ಆದೇಶದ ಅಧಿಕೃತ ಮಾಹಿತಿ ಜಿಲ್ಲಾಡಳಿತಕ್ಕೆ ತಲುಪಿಲ್ಲ. ಹೈಕೋರ್ಟ್ ಆದೇಶದ ಪ್ರತಿ ಹಾಗೂ ಸರಕಾರದ ಸೂಚನೆಯಂತೆ ಜಿಲ್ಲಾಡಳಿತವು ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಚೆನ್ನಬಸಪ್ಪರವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News