'50 ಆಪ್ತರನ್ನು ತೃಪ್ತಿಪಡಿಸಲು ಪ್ರಧಾನಿಯಿಂದ ನೋಟು ರದ್ದು'
ಬೆಳಗಾವಿ,ಡಿ. 17:. ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸಿರುವ ತೀರ್ಮಾನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತ ಬಳಗದ 50 ಪ್ರಭಾವಿಗಳನ್ನು ತೃಪ್ತಿಪಡಿಸುವ ಉದ್ದೇಶ ಹೊಂದಿದ್ದು, ಬಡವರ ಹಣ ಕಸಿದು ಶ್ರೀಮಂತರ ಕಿಸೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಆಪ್ತರು ಬ್ಯಾಂಕ್‌ಗಳಿಂದ 8 ಲಕ್ಷ ಕೋಟಿ ರೂಪಾಯಿ ಸಾಲ ಪಡೆದು ಮರು ಪಾವತಿ ಮಾಡಿಲ್ಲ. ಇದರಿಂದ ಬ್ಯಾಂಕ್‌ಗಳು ಕಾರ್ಯನಿರ್ವಹಿಸದ ಸಂದಿಗ್ದ ಸ್ಥಿತಿಗೆ ತಲುಪಿವೆ. ತಮ್ಮ ಆಪ್ತರನ್ನು ಉಳಿಸಲು ಪ್ರಧಾನಿ ಮುಂದಾಗಿದ್ದು, ಬರುವ ದಿನಗಳಲ್ಲಿ ಬಡವರ ಹಣವನ್ನು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಹಣ ಕಪ್ಪುಹಣವಲ್ಲ. ಎಲ್ಲಾ ಕಪ್ಪು ಹಣ ನಗದು ರೂಪದಲ್ಲಿಲ್ಲ. ಇಂತಹ ಕಾಳಧನ ಶೇ 1 ರಷ್ಟು ಜನರ ಬಳಿ ಇದೆ. ಇಂತಹ ವ್ಯಕ್ತಿಗಳೇ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ವಿದೇಶಗಳಿಗೆ ಮೋದಿ ಅವರ ಜತೆ ಪ್ರವಾಸ ಮಾಡುತ್ತಾರೆ. ಇಂತಹವರಿಗೆ ಸಾಲ ನೀಡಿದ ಬ್ಯಾಂಕ್‌ಗಳು ನಷ್ಟದಲ್ಲಿವೆ. ಬಡವರ ಬಳಿ ಹಣ ಕಸಿದು, ಶೇ 1 ರಷ್ಟು ಶ್ರೀಮಂತ ವ್ಯಕ್ತಿಗಳಿಗೆ ನೀಡಿ ಮೋದಿ ತಮ್ಮವರನ್ನು ಸಂತೃಪ್ತಪಡಿಸುತ್ತಾರೆ ಎಂದರು.
ಬಡವರ ಹಣ ಹೆಚ್ಚು ಸಮಯ ಬ್ಯಾಂಕ್‌ಗಳಲ್ಲಿರಬೇಕು ಎನ್ನುವ ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಮುದ್ರಣವಾಗುವ ನೋಟು ಬ್ಯಾಂಕ್‌ಗಳಲ್ಲಿ ಇಡಬೇಕು ಎನ್ನುವ ಉದ್ದೇಶ ಪ್ರಶ್ನಾರ್ಹ. ಹೀಗೆ ಮಾಡಿದರೆ ನಿಮ್ಮ ಹಣ ಶ್ರೀಮಂತರ ಬೊಕ್ಕಸ ಸೇರಲಿದೆ. ನಗದು ರಹಿತ ವಹಿವಾಟು ಎನ್ನುತ್ತಾರೆ. ಇಂತಹ ವ್ಯವಹಾರಗಳಲ್ಲೂ ಸಹ ಶೇ 5 ರಷ್ಟು ದಲ್ಲಾಳಿ ಹಣವನ್ನು ಇದೇ 50 ಮಂದಿ ಮೋದಿ ಬೆಂಬಲಿಗ ಶ್ರೀಮಂತರ ಕಿಸೆ ಸೇರಲಿದೆ ಎಂದು ಎಚ್ಚರಿಸಿದರು.
15 ಉದ್ಯೋಗಪತಿಗಳ 1.10 ಲಕ್ಷ ಕೋಟಿ ರೂ ಸಾಲ ಮನ್ನಾ
ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ 15 ಉದ್ಯೋಗಪತಿಗಳ 1.10 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದೆ. ಇಂತಹ ಇತಿಹಾಸ ಹೊಂದಿರುವ ಈ ಸರ್ಕಾರ ಬರುವ ದಿನಗಳಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲ ಕಲ್ಪಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ದೇಶವನ್ನು ಕೊಳ್ಳೆ ಹೊಡೆದ ಲಲಿತ್ ಮೋದಿ, ಬ್ಯಾಂಕ್‌ಗಳಿಗೆ ವಂಚಿಸಿರುವ ವಿಜಯ್ ಮಲ್ಯ ಯಾಕೆ ಈ ದೇಶದಲ್ಲಿಲ್ಲ. ಅವರನ್ನು ಕರೆ ತಂದು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆ. ಮಲ್ಯ ಈ ದೇಶದ ಬಹುದೊಡ್ಡ ಕಳ್ಳ. ಇವರೆಲ್ಲಾ ದೇಶ ತೊರೆದಿರುವುದನ್ನು ನೋಡಿದರೆ ಕಾಳಧನಿಕರ ವಿರುದ್ಧ ಸರ್ಕಾರಕ್ಕೆ ಯಾವ ರೀತಿಯ ಕಳಕಳಿ ಇದೆ ಎನ್ನುವುದು ತಿಳಿಯುತ್ತದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಬಿಜೆಪಿಯ ಜನಾರ್ದನ ರೆಡ್ಡಿ ಪರಿವಾರದ ಮದುವೆಗೆ 500 ಕೋಟಿ ರೂ ಹಣವನ್ನು ವೆಚ್ಚ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕದ ಬಿಜೆಪಿ ಮುಖಂಡರು ಎಷ್ಟು ಹಣವನ್ನು ಬ್ಯಾಂಕಿಗೆ ಜಮಾ ಮಾಡಿದ್ದಾರೆ. ಬಿಹಾರದಲ್ಲಿ ಬಿಜೆಪಿಗೆ ಸೇರಿದ ಆಸ್ತಿ ಖರೀದಿಸಲಾಗಿದೆ. ಒರಿಸ್ಸಾದಲ್ಲಿ ಭೂಮಿ ಖರೀದಿ ಮಾಡುತ್ತಾರೆ. ಸೆಪ್ಟೆಂಬರ್‌ನಲ್ಲಿ 8 ಲಕ್ಷ ಕೋಟಿ ರೂ ಬ್ಯಾಂಕ್‌ಗಳಿಗೆ ಜಮಾ ಆಗಿದೆ. ಈ ಹಣವೆಲ್ಲಾ ನರೇಂದ್ರ ಮೋದಿ ಅವರ ಪರಿವಾರದವರ ಹಣವಾಗಿದೆ ಎಂದರು.
ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಂಡಿದ್ದರೆ ನಮ್ಮ ಪಕ್ಷ ಕೂಡ ಬೆಂಬಲ ನೀಡುತ್ತಿತ್ತು. ಆದರೆ ಮೋದಿ ಅವರ ನಿಜವಾದ ಉದ್ದೇಶ ಬೇರೆಯದೇ ಆಗಿದೆ. ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವವರ ಮಾಹಿತಿ ಸರ್ಕಾರದ ಬಳಿ ಇದೆ. ಸರ್ಕಾರಕ್ಕೆ ನಿಜಕ್ಕೂ ಕಾಳಧನಿಕರ ಮೇಲೆ ಕ್ರಮ ಕೈಗೊಳ್ಳುವ ಉದ್ದೇಶವಿದ್ದಿದ್ದರೆ ಹೆಸರು ಬಹಿರಂಗಪಡಿಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಮೋದಿ ಇವರನ್ನು ರಕ್ಷಿಸುತ್ತಿದ್ದಾರೆ. ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಹೊಂದಿರುವವರ ಹೆಸರು ಬಹಿರಂಗಪಡಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಯಾಕೆ ಇನ್ನೂ ಬಹಿರಂಗಪಡಿಸಿಲ್ಲ. ಯಾರನ್ನು ರಕ್ಷಿಸುತ್ತಿದ್ದೀರಿ. ಕ್ರಮ ಕೈಗೊಂಡಿದ್ದರೆ ಬಡವರ ಖಾತೆಗೆ 15 ಲಕ್ಷ ರೂ ಹಣ ಬರುತ್ತಿತ್ತು. ಆದರೆ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ನೇರ ವಾಗ್ದಾಳಿ ಮಾಡಿದರು.
ಜನ ಉಳಿಸಿದ ಹಣವನ್ನು ನಿವೇಶನ, ಭೂಮಿ, ಷೇರುಗಳ ಮೇಲೆ ಹೂಡಿಕೆ ಮಾಡುತ್ತಾರೆ. ಈ ಮಾತನ್ನು ಸ್ವತಃ ನರೇಂದ್ರ ಮೋದಿ ಅವರೇ ಹೇಳಿದ್ದರು. ಆದರೆ ಈಗ ಇಂತಹ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸಿದ್ದಾರೆ. ನರೇಂದ್ರ ಮೋದಿ ಕಳೆದ ಚುನಾವಣೆಯ ಪ್ರತಿಯೊಂದು ಭಾಷಣದಲ್ಲೂ ವಿದೇಶಿ ಕಪ್ಪು ಹಣದ ಬಗ್ಗೆ ಭಾಷಣ ಮಾಡಿದ್ದರು. ವಿದೇಶಿ ಬ್ಯಾಂಕ್‌ಗಳಲ್ಲಿರುವ ಹಣವನ್ನು ವಾಪಸ್ ತರುವುದಾಗಿ ನೀಡಿದ್ದ ವಾಗ್ದಾನ ಈಡೇರಿಲ್ಲ.
ಸರತಿ ಸಾಲಿನಲ್ಲಿ ನಿಂತು ಬ್ಯಾಂಕ್‌ನಿಂದ ಹಣ ಪಡೆಯುತ್ತಿರುವವರನ್ನು ಕಳ್ಳರು ಎಂದು ಮೋದಿ ಕೀಟಲೆ ಮಾಡುತ್ತಿದ್ದರು. ಬ್ಯಾಂಕ್‌ನ ಮುಂಭಾಗ ಜವಾಬ್ದಾರಿ ವ್ಯಕ್ತಿಗಳು ನಿಂತಿದ್ದಾರೋ ಇಲ್ಲವೆ ಕಳ್ಳರು ನಿಂತಿದ್ದಾರೋ ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದ ರಾಹುಲ್ ಗಾಂಧಿ, ದೇಶದ ಕೋಟ್ಯಂತರ ಮಹಿಳೆಯರು ಮಕ್ಕಳಿಗಾಗಿ ಹಣ ಉಳಿಸುತ್ತಾರೆ. ತಂದೆ ತಾಯಿಗಳ ಯೋಗ ಕ್ಷೇಮಕ್ಕಾಗಿ ಹಣ ಗಳಿಸುತ್ತಾರೆ. ಹಾಗಾದರೆ ನಿಮ್ಮ ಪ್ರಕಾರ ಇವರೆಲ್ಲರೂ ಕಳ್ಳರೆ? ಎಂದು ಪ್ರಶ್ನಿಸಿದರು.
13 ಲಕ್ಷ ಕೋಟಿ ರೂ ಹಣ ಬ್ಯಾಂಕ್‌ಗಳಿಗೆ ವಾಪಸ್ ಬಂದಿದೆ. ಹೀಗಾಗಿ ಭ್ರಷ್ಟಾಚಾರ, ಭಯೋತ್ಪಾದಕರಿಗೆ ಹಣ ಹೋಗುತ್ತಿದೆ ಎನ್ನುವ ಮಾತನ್ನು ಬಿಜೆಪಿಯವರು ಹೇಳುತ್ತಿಲ್ಲ. ಈಗ ನಗದು ರಹಿತ ವಹಿವಾಟು ಎನ್ನುವ ಹೊಸ ಅವತಾರ ಎತ್ತಿದ್ದಾರೆ. ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಮೋದಿ ಪರ ನಾಟಕಕಾರರು ಹೊಸ ಹೊಸ ಕಥೆ ಕಟ್ಟಿದ್ದರು. ಈಗ ನಾಟಕದ ಸ್ಕ್ರಿಪ್ಟ್ ನಗದು ರಹಿತ ವಹಿವಾಟಿಗೆ ಬದಲಾಗಿದೆ. ಈಗ ದೇಶದ ಜನ ನಗದು ಮೂಲಕ ವ್ಯವಹರಿಸುತ್ತಾರೆ. ಕಾರ್ಡ್‌ಗಳನ್ನು ಬಳಸುವುದಿಲ್ಲ. ಆದರೆ ಈಗ ನಗದು ರಹಿತ ವಹಿವಾಟು ವಲಯದಲ್ಲೂ ಮೋದಿ ಬಳಗ ಶೇ 5 ರಷ್ಟು ಕಮೀಷನ್ ಪಡೆಯಲಿದ್ದಾರೆ ಎಂದರು.
ನೋಟು ಅಮಾನ್ಯತೆ ನಂತರ ಎಷ್ಟೋ ಕೈಗಾರಿಕೆಗಳು ನಾಶವಾಗಿವೆ. ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆಟೋ ಮೊಬೈಲ್, ಸಿದ್ಧ ಉಡುಪು, ಕೃಷಿ ವಲಯ, ಬೆಂಗಳೂರಿನ ಕಂಪ್ಯೂಟರ್ ಹಾರ್ಡ್‌ವೇರ್ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಪ್ರತಿವರ್ಷ ಎರಡೂವರೆ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನೀಡಿದ ಭರವಸೆ ಏನಾಗಿದೆ. ಎಷ್ಟು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಪ್ರಧಾನಿಯಾದವರು ಬಡವರ ಮೇಲೆ ಆಕ್ರಮಣ ಮಾಡಿದ್ದಾರೆ. ಪ್ರಧಾನಿ ದೇಶ, ಆರ್ಥಿಕ ವ್ಯವಸ್ಥೆಯ ಬಗ್ಗೆ ಕೆಲಸ ಮಾಡುತ್ತಾರೆ. ಆದರೆ ಈಗಿನ ಸರ್ಕಾರ ಬಡವರ ವಿರುದ್ಧವಾಗಿದೆ. ನೂರಕ್ಕೂ ಹೆಚ್ಚು ಮೃತಪಟ್ಟಿದ್ದು, ಇದಕ್ಕೆ ಮೋದಿ ಅವರೇ ಕಾರಣರಾಗಿದ್ದಾರೆ. ಜನ ನೋಟುಗಳಿಲ್ಲದೇ ಆಹಾರ ಪಡೆಯಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದರು.
ಮೋದಿ ಪ್ರತಿಯೊಂದು ವಿಚಾರದ ಬಗ್ಗೆಯೂ ಲೇವಡಿ ಮಾಡುತ್ತಾರೆ. ಲೋಕಸಭೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಲೇವಡಿ ಮಾಡಿದ್ದರು. ಭೂ ಸ್ವಾಧೀನ ಮಸೂದೆ ಜಾರಿಗೆ ತರಲು ತೀವ್ರ ಪ್ರಯತ್ನ ನಡೆಸಿದರು. ಈ ಸಂಬಂಧ ಮೂರು ಬಾರಿ ಸುಗ್ರಿವಾಜ್ಞೆ ಹೊರಡಿಸಲಾಯಿತು. ರೈತರ ಭೂಮಿ ಕಸಿಯುವ ಇವರ ಉದ್ದೇಶ ಈಡೇರಿಸಲು ನಾವು ಬಿಡಲಿಲ್ಲ ಎಂದರು.
ಪ್ರಧಾನಿ ಅವರನ್ನು ನಿನ್ನೆ ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಅವರು ನಿಮ್ಮನ್ನು ಭೇಟಿ ಮಾಡಲು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅವರ ಭೇಟಿಗೆ ಅವಕಾಶ ನೀಡಿ. ನೆರವಿಗೆ ಬನ್ನಿ ಎಂದು ಖರ್ಗೆ ಮೋದಿ ಅವರಿಗೆ ಮನವಿ ಮಾಡಿದರು.
ಸಹಕಾರ ವ್ಯವಸ್ಥೆ ಕುಸಿತವಾಗಿದೆ. ರೈತರ ಬದುಕು ದುಸ್ತರವಾಗಿದೆ ಎಂದು ಖರ್ಗೆ ಹೇಳಿದಾಗಲೂ ಮೋದಿ ತುಟಿಕ್ ಪಿಟಿಕ್ ಎನ್ನಲಿಲ್ಲ. ಸಿದ್ದರಾಮಯ್ಯ ಚುನಾಯಿತ ಮುಖ್ಯಮಂತ್ರಿ. ಅವರ ಭೇಟಿಗೆ ಅವಕಾಶ ನೀಡಲು ಸಮಯವಿಲ್ಲ ಎಂದರೆ ತಮ್ಮ ಸಮಯವನ್ನು ಮೋದಿ ಯಾರಿಗಾಗಿ ಮೀಸಲಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನ ವಿರೋಧಿಯಾಗಿದೆ. ಬರುವ ಚುನಾವಣೆಯಲ್ಲಿ ಮೋದಿ ಸರ್ಕಾರ ಪತನವಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.