ನೋಟು ಬದಲಾವಣಾ ದಂಧೆ: ಹಾಲಿನ ವ್ಯಾಪಾರಿಯಿಂದ 15 ಲಕ್ಷ ರೂ. ದರೋಡೆ
ಶಿವಮೊಗ್ಗ, ಡಿ.17: ತಮ್ಮ ಬಳಿಯಿರುವ ರದ್ದುಗೊಂಡಿರುವ ಹಳೆಯ ನೋಟು ಬದಲಾಯಿಸಿಕೊಟ್ಟರೆ ಕಮೀಷನ್ ಕೊಡುವುದಾಗಿ ಹಾಲಿನ ವ್ಯಾಪಾರಿಗೆ ನಂಬಿಸಿ, ತದನಂತರ ವ್ಯಾಪಾರಿಗೆ ಮಾರಾಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿ 15 ಲಕ್ಷ ರೂ. ದರೋಡೆ ಮಾಡಿದ್ದ 9 ಜನರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಐವರು ಶಿವಮೊಗ್ಗದ ರೌಡಿಗಳಾಗಿದ್ದು, ಇವರು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಶಿವಮೊಗ್ಗದ ವಡ್ಡಿನಕೊಪ್ಪದ ಬಾಲು ಬಿನ್ ಬಂಕ್‌ಬಾಲು(26), ಕಾಶಿಪುರದ ಕಾರ್ತಿಕ್ ಅಲಿಯಾಸ್ ಕಾಡು (27), ಬಿಳುವೆ ಗ್ರಾಮದ ರಘುನಾಥ್ ಶೆಟ್ಟಿ (26), ಹೊಸಮನೆ 4ನೆಯ ಕ್ರಾಸ್‌ನ ಅಜಯ ಅಲಿಯಾಸ್ ಕರೆಂಟ್(24), ಹರಿಗೆಯ ಅಂಥೋಣಿ ಅಲಿಯಾಸ್ ಜಾನಿ (33), ಅರುಣ ಅಲಿಯಾಸ್ ಗೂನು(26), ಕಾಶಿಪುರದ ರವಿಕಿರಣ್ ಅಲಿಯಾಸ್ ಗಜ (24), ಮಲವಗೊಪ್ಪದ ಫಾರೂಕ್ ಮುಹಮ್ಮ್ಮದ್ ಹನೀಫ್(33) ಮತ್ತು ಹರಿಗೆಯ ಕಿರಣ್ ಬಿನ್ ಕುಮಾರ್(24) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 8 ಲಕ್ಷ ನಗದು, ಕೃತ್ಯಕೆ ಬಳಸಿದ ಮೂರು ಬೈಕ್, ಒಂದು ಕಾರು, ದೋಚಿದ ಹಣದಿಂದ ಖರೀದಿಸಿದ ಒಂದು ಸ್ವಿಫ್ಟ್ ಕಾರು, ಮೂರು ಲಾಂಗ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿ ಬೈಪಾಸ್‌ನ ಡಾಬಾವೊಂದರ ಬಳಿ ಬೀಡುಬಿಟ್ಟಿದ್ದ ಎಲ್ಲ ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ್ದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಅಪರಾಧ ಪತ್ತೆ ದಳದ ಇನ್‌ಸ್ಪೆಕ್ಟರ್‌ಗಳಾದ ಕುಮಾರ್, ಚಂದ್ರಶೇಖರ್, ಮುತ್ತನಗೌಡ, ಭದ್ರಾವತಿ ನಗರ ಸಿಪಿಐ ವರದರಾಜ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆಯ ಹಿನ್ನೆಲೆ:
ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಕರಣದ ಮಾಹಿತಿ ನೀಡಿದರು. ಭದ್ರಾವತಿಯ ಉಜ್ಜನೀಪುರದ ಹಾಲಿನ ವ್ಯಾಪಾರಿ ಪ್ರಕಾಶ್ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ತಮ್ಮ ಬಳಿ ಲಕ್ಷಾಂತರ ರೂ. ಮೌಲ್ಯದ ಕಪ್ಪು ಹಣವಿದೆ. ಇದನ್ನು ಹೊಸ ನೋಟುಗಳಿಗೆ ಪರಿವರ್ತನೆ ಮಾಡಿಕೊಟ್ಟರೆ ಕಮೀಷನ್ ನೀಡುವುದಾಗಿ ನಂಬಿಸಿದ್ದರು.
ಆರೋಪಿಗಳ ಮಾತು ನಂಬಿದ ಪ್ರಕಾಶ್‌ರವರು ತಮ್ಮ ಬಳಿ ಹಾಗೂ ಇತರರ ಬಳಿ 15 ಲಕ್ಷ ರೂ. ಸಂಗ್ರಹಿಸಿಕೊಂಡು ಡಿ. 5 ರಂದು ಭದ್ರಾವತಿ ಹೊರವಲಯದ ಬೈಪಾಸ್ ರಸ್ತೆಯ ಬಳಿ ಆಗಮಿಸಿದ್ದರು. ಈ ವೇಳೆ ಪ್ರಕಾಶ್‌ರವರನ್ನು ಕಾರಿನಲ್ಲಿ ಕರೆದೊಯ್ದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹತ್ಯೆ ಮಾಡುವ ಬೆದರಿಕೆ ಹಾಕಿ ಅವರ ಬಳಿಯಿದ್ದ 15 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.
ಈ ಕುರಿತಂತೆ ಪ್ರಕಾಶ್‌ರವರು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಇನ್‌ಸ್ಪೆೆಕ್ಟರ್ ಕುಮಾರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಆರೋಪಿಗಳಿಗಾಗಿ ಬೆಂಗಳೂರು, ಚಿತ್ರದುರ್ಗ ಮೊದಲಾದೆಡೆ ಶೋಧ ಕಾರ್ಯಾಚರಣೆ ನಡೆಸಿತ್ತು.
ಬೆಂಗಳೂರಿನಲ್ಲಿದ್ದರು:
ಹಣ ದೋಚಿದ ನಂತರ ಎಲ್ಲ ಆರೋಪಿಗಳು ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ದರೋಡೆ ಮಾಡಿದ್ದ ಹಣದಲ್ಲಿ ಕಾರೊಂದನ್ನು ಖರೀದಿಸಿದ್ದರು. ಮೋಜು, ಮಸ್ತಿಗೆ ಅಪಾರ ಹಣ ಖರ್ಚು ಮಾಡಿದ್ದರು. ಬೆಂಗಳೂರಿನಿಂದ ಅವರು ಭದ್ರಾವತಿಯ ಬೈಪಾಸ್ ರಸ್ತೆಯ ಡಾಬಾ ಬಳಿ ಆಗಮಿಸಿದ್ದ ಮಾಹಿತಿ ಪಡೆದ ವಿಶೇಷ ಪೊಲೀಸ್ ತಂಡ ಇವರನ್ನು ಬಂಧಿಸಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಕುಖ್ಯಾತ ರೌಡಿಗಳು ಹಲವು ಕೃತ್ಯಗಳಲ್ಲಿ ಭಾಗಿ
ಬಂಧಿತ ಆರೋಪಿಗಳಲ್ಲಿ ಶಿವಮೊಗ್ಗ ನಗರದ ಐವರು ಕುಖ್ಯಾತ ರೌಡಿಗಳು ಕೂಡ ಇದ್ದಾರೆ. ಇವರ ವಿರುದ್ಧ ಕೋಟೆ, ವಿನೋಬನಗರ, ಗಾಮಾಂತರ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಗಳಲ್ಲಿ ಸರಿಸುಮಾರು 17 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೊಲೆ, ಸುಲಿಗೆ, ಕೊಲೆ ಯತ್ನ, ವಂಚನೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಇವರು ಭಾಗಿಯಾಗಿ ಪೊಲೀಸರಿಂದ ಬಂಧಿತರಾಗಿ ಜೈಲ್‌ಗೆ ಹೋಗಿದ್ದರು. ತದನಂತರ ಜಾಮೀನಿನ ಮೇಲೆ ಹೊರಬಂದಿದ್ದರು.
ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದರು. ಇವರೆಲ್ಲರ ವಿರುದ್ಧ ಅರೆಸ್ಟ್ ವಾರೆಂಟ್ ಸಹ ನ್ಯಾಯಾಲಯ ಜಾರಿಗೊಳಿಸಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಮಾಹಿತಿ ನೀಡಿದ್ದಾರೆ.