ಜಿಲ್ಲೆಗೆ ಆಗಮಿಸಿದರೂ ನಿರಾಶ್ರಿತರ ಕಡೆ ತಿರುಗಿಯೂ ನೋಡದ ಸಚಿವರು

Update: 2016-12-17 15:19 GMT

 ಮಡಿಕೇರಿ, ಡಿ.17: ಸಿದ್ದಾಪುರ ಮೀಸಲು ಅರಣ್ಯದಲ್ಲಿ ಗುಡಿಸಲು ನಿರ್ಮಿಸಿದ ಗಿರಿಜನರನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆ ಕ್ರಮವನ್ನು ಖಂಡಿಸಿ, ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗಿರಿಜನರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಭೂಮಿ, ವಸತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಸಿರಿಮನೆ ನಾಗರಾಜ್ ಸರಕಾರಕ್ಕೆ ಆಗ್ರಹಿಸಿದ್ದಾರೆ.

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2 ದಿನಗಳಿಂದ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ . ಸರಕಾರದ ಸಚಿವರುಗಳು ಜಿಲ್ಲೆಗೆ ಬಂದರು ಸೌಜನ್ಯಕಾದರೂ ಆದಿವಾಸಿಗಳ ಹೋರಾಟ ಸ್ಥಳಕ್ಕೆ ಬರಬೇಕಿತ್ತು. ಆದಿವಾಸಿಗಳ ಬಗ್ಗೆ ಇವರಿಗೆ ಕಾಳಜಿ ಇಲ್ಲಾ, ಹಸಿವಿನಿಂದ ಇಲ್ಲಿನ ಜನರು ಗಾಳಿ, ಮಳೆ ನಡುವೆ ಪುಟ್ಟ ಕಂದಮ್ಮಗಳೊಂದಿಗೆ ಅತಂತ್ರ ಬದುಕು ಸಾಗಿಸುತ್ತಿದ್ದಾರೆ ಜಿಲ್ಲಾಧಿಕಾರಿಗಳು ಇತ್ತ ಕಡೆ ತಿರುಗಿಯು ನೋಡಿಲ್ಲ ಕೊಡಲೇ ಆದಿವಾಸಿಗಳಿಗೆ ನಿವೇಶನ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು.

ಸುಮಾರು 3 ಸಾವಿರ ಮಂದಿಯನ್ನು ಕಸದ ರಾಶಿಯಂತೆ ಅಮಾನವೀಯ ರೀತಿಯಲ್ಲಿ ಜೆಸಿಬಿ ಬಳಸಿ ಬೀದಿಪಾಲು ಮಾಡಿರುವುದು ಕರ್ನಾಟಕ ರಾಜ್ಯದಲ್ಲಿ ಇದೇ ಪ್ರಥಮವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರಕಾರದ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ದೌರ್ಜನ್ಯ ನಡೆಸುತ್ತಿದೆಯೆಂದು ಆರೋಪಿಸಿದರು.


   ಜಿಲ್ಲಾಧಿಕಾರಿಗಳ ಮೇಲೆ ತೀವ್ರ ಒತ್ತಡವಿರುವಂತೆ ಕಂಡು ಬರುತ್ತಿದ್ದು, ನಿರಾಶ್ರಿತರ ಬಗ್ಗೆ ಕೇಳಲಾಗುವ ಯಾವುದೇ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಮೌನವನ್ನಷ್ಟೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು. ನಿರಾಶ್ರಿತರಿಗೆ ಮನೆ ಒದಗಿಸುವವರೆಗೆ ನಾವು ಮನೆಗೆ ತೆರಳುವುದಿಲ್ಲವೆಂದು ತಿಳಿಸಿದ ಅವರು, ರವಿವಾರ ಬೆಳಗ್ಗೆ 10:30 ಕ್ಕೆ ನಡೆಯುವ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸಿ.ಎಸ್. ದ್ವಾರಕ್‌ನಾಥ್, ಗೌರಿ ಲಂಕೇಶ್, ನೂರ್ ಶ್ರೀಧರ್ ಸೇರಿದಂತೆ 60 ಕ್ಕೂ ಹೆಚ್ಚಿನ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. ಆದಿವಾಸಿಗಳಿಗೆ ಆಶ್ರಯ ಕಲ್ಪಿಸಲು ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳದಿದ್ದಲ್ಲಿ ರಾಜ್ಯ ವ್ಯಾಪಿ ಕೊಡಗು ಚಲೋ ಹೋರಾಟಕ್ಕೆ ಕರೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದರು.

 ಮೂರು ಹಕ್ಕೋತ್ತಾಯಗಳ ಮೂಲಕ ಮುಂದಿನ ಹೋರಾಟದ ಬಗ್ಗೆ ಸಂಕಲ್ಪಸಭೆಯಲ್ಲಿ ಚಿಂತನೆ ನಡೆಸಲಾಗುವುದೆಂದು ತಿಳಿಸಿದರು.  ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಗುಡಿಸಲುಗಳನ್ನು ಕಳೆದುಕೊಂಡ ಆದಿವಾಸಿಗಳಿಗೆ ಅದೇ ಪ್ರದೇಶದಲ್ಲಿ ನಿವೇಶನ ಮಂಜೂರು ಮಾಡಬೇಕು, ರಾಜ್ಯದ ಎಲ್ಲಾ ಆದಿವಾಸಿಗಳಿಗೆ ಆದಿವಾಸಿ ಅರಣ್ಯ ಹಕ್ಕು ಮಸೂದೆಯಡಿ ಭೂಮಿಯ ಹಕ್ಕನ್ನು ನೀಡಬೇಕು ಹಾಗೂ ಅನಾದಿ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎನ್ನುವ ಒತ್ತಾಯವನ್ನು ಸಭೆಯಲ್ಲಿ ಮಂಡಿಸಲಾಗುವುದೆಂದು ಅವರು ಹೇಳಿದ್ದಾರೆ.

  
     ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಮಾತನಾಡಿ, ಡಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡವರು ಕಳೆೆದ ಅನೇಕ ವರ್ಷಗಳಿಂದ ಇದೇ ಪ್ರದೇಶದಲ್ಲಿ ನೆಲೆಸಿದ್ದ ಮೂಲ ನಿವಾಸಿಗಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಕಾರ್ಮಿಕರಾಗಿ ಹೊಟ್ಟೆಪಾಡಿಗಾಗಿ ದುಡಿಯಲು ಹೋದವರು ಮತ್ತೆ ಬಂದು ಈ ಪ್ರದೇಶದಲ್ಲಿ ನೆಲೆ ಕಂಡುಕೊಳ್ಳಲು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆೆ ಹಾಗೂ ಕಂದಾಯ ಇಲಾಖೆ ಪಿತೂರಿ ನಡೆಸಿ, 577 ಕುಟುಂಬಗಳ ಗುಡಿಸಲುಗಳನ್ನು ನಾಶ ಮಾಡಿವೆ.  ಗುಡಿಸಲುಗಳಿದ್ದ ಪ್ರದೇಶವನ್ನು ಆರ್‌ಟಿಸಿಯಲ್ಲಿ ಅರಣ್ಯ ಪೈಸಾರಿ ಎಂದು ನಮೂದಿಸಲಾಗಿದೆ. ಆದರೆ, ಅರಣ್ಯ ಇಲಾಖೆ ಇದನ್ನು ಮೀಸಲು ಅರಣ್ಯವೆಂದು ಹೇಳಿಕೊಂಡು ಬಂದಿದೆ. ವ್ಯವಸಾಯಕ್ಕೆ ಯೋಗ್ಯವಾಗಿಲ್ಲದ ಭೂಮಿಯನ್ನು ಮರಗಳನ್ನು ಬೆಳೆಸುವುದಕ್ಕಾಗಿ ಅರಣ್ಯ ಇಲಾಖೆಯ ಉಸ್ತುವಾರಿಗೆ ಕಂದಾಯ ಇಲಾಖೆ ವರ್ಗಾವಣೆ ಮಾಡಿದ ಭೂಮಿ ಇದಾಗಿದೆಯೆಂದು ಎ.ಕೆ. ಸುಬ್ಬಯ್ಯ ಸ್ಪಷ್ಟನೆ ನೀಡಿದರು.

ಚಿತ್ರನಟ ಚೇತನ್ ಮಾತನಾಡಿ, ಬೆಳ್ಳಿ ಪರದೆಯ ಮೇಲಿನ ಹೀರೋಗಳು ನಿಜ ಜೀವನದಲ್ಲಿ ಶೋಷಿತರ ಪರವಾಗಿ ಕೆಲಸ ಮಾಡುವ ಮೂಲಕ ಹೀರೋಗಳಾಗಬೇಕೆಂದರು. ಮೂರು ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅಹಿಂದ ಪರ ಮುಖ್ಯಮಂತ್ರಿ ಎನ್ನುವ ಭಾವನೆ ಇತ್ತು. ಆದರೆ, ಇಂದು ಸರಕಾರವೇ ಶೋಷಣೆಯಲ್ಲಿ ತೊಡಗಿದೆ. ಶುಕ್ರವಾರ ಜಿಲ್ಲೆಗಾಗಮಿಸಿದ್ದ ನಾಲ್ವರು ಸಚಿವರು ನಿರಾಶ್ರಿತರನ್ನು ಭೇಟಿಯಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಆರೋಪಿಸಿದರು.

ಬೆಂಗಳೂರಿನಂತಹ ಮಹಾನಗರದಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಶ್ರೀಮಂತರಿಗೆ ಅಸ್ಟೇ ಎನ್ನುವ ಅಸ್ತ್ರ ಬಳಸಿ ರಕ್ಷಣೆ ನೀಡಲಾಗುತ್ತಿದೆ. ಆದರೆ, ದಿಡ್ಡಳ್ಳಿಯಂತಹ ದುರ್ಬಲರ ಗುಡಿಸಲುಗಳನ್ನು ನಾಶಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಪಿಐಎಂಎಲ್ ಪಕ್ಷದ ನಿರ್ವಾಣಪ್ಪ ಮಾತನಾಡಿ, ದಿಡ್ಡಳ್ಳಿ ಗಿರಿಜನರ ಪರ ಹೋರಾಟ ನಡೆಸುತ್ತಿರುವ ಅಪ್ಪಾಜಿ ಹಾಗೂ ಮುತ್ತಮ್ಮ ಅವರುಗಳ ವಿರುದ್ಧ ಹೇಳಿಕೆ ನೀಡಿರುವ ಬುಡಕಟ್ಟು ಜನರ ಸಮನ್ವಯ ಸಮಿತಿಯ ಪದಾಧಿಕಾರಿಗಳು ಇಲ್ಲಿಯವರೆಗೆ ದಿಡ್ಡಳ್ಳಿಗೆ ಭೇಟಿ ನೀಡಿಲ್ಲ. ಯಾರದೋ ಪ್ರಚೋದನೆಗೆ ಒಳಗಾಗಿ ಅವರು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಗಿರಿಜನರನ್ನು ಬೀದಿಪಾಲು ಮಾಡಿರುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

  ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿದರು.

ಈ ಸಂದಭರ್ ಮೈಸೂರು ರೈತ ಸಂಘದ ಅಧ್ಯಕ್ಷ ಗುರುಮೂರ್ತಿ, ಸಮಾಜ ಪರಿವರ್ತನ ಸಮಿತಿ ರಾಜ್ಯ ಅಧ್ಯಕ್ಷ ಡಾ ಕೃಷ್ಣಮೂರ್ತಿ, ಮಂಡ್ಯ ಜನಶಕ್ತಿ ಸಮಿತಿಯ ಮಲ್ಲಿಗೆ, ಕರ್ನಾಟಕ ರೈತ ಸಂಘದ ಕಂದೆಗಾಲ ಶ್ರೀನಿವಾಸ್, ಮಂಜು, ಜಿಲ್ಲೆಯ ಪ್ರಮುಖರಾದ ನಿರ್ವಾಣಪ್ಪ, ಕಾವೇರಿ, ಎಸ್‌ಡಿಪಿಐ ಪಕ್ಷದ ಜಿಲ್ಲಾ ಪ್ರಮುಖರಾದ ಆಮೀನ್ ಮೊಹಿಸಿನ್, ಪೀಟರ್, ಮನ್ನಸೂರ್, ನಾಗರತ್ನ್ನಾ, ಶೌಕತಾಲಿ, ಮುಸ್ತಫ ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು.

ಮತ್ತೊಮ್ಮೆ ಬೆತ್ತಲೆ ಪ್ರತಿಭಟನೆ ನಡೆಸುವ ಎಚ್ಚರಿಕೆ

 ಹೋರಾಟಗಾರ್ತಿ ಜೇನು ಕುರುಬರ ಮುತ್ತಮ್ಮ ಮಾತನಾಡಿ, ಗುಡಿಸಲುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ತಾನು ಮಾಡಿದ ಬೆತ್ತಲೆ ಹೊರಾಟಕ್ಕೂ ಪ್ರತಿಫಲ ಸಿಗಲಿಲ್ಲವೆಂದು ಬೆೇಸರ ವ್ಯಕ್ತಪಡಿಸಿದರು. ಹೋರಾಟಗಾರರನ್ನು ಜೈಲಿಗೆ ತಳ್ಳುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಆದರೆ, ನಿರಾಶ್ರಿತರಿಗೆ ಭೂಮಿಯ ಹಕ್ಕು ಸಿಗುವವರೆಗೆ ತಮ್ಮ ಹೋರಾಟ ನಿಲ್ಲದು ಮತ್ತು ಹೋರಾಟಕ್ಕೆ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ ಮತ್ತೊಮ್ಮೆ ಬೆತ್ತಲೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಡಿ.18 ರಂದು ನಿರಾಶ್ರಿತರಿಂದ ಧರಣಿ 

 ರಾಜ್ಯದ ವಿವಿಧ ಸಂಘಟನೆಗಳಿಂದ ಸಂಕಲ್ಪಸಭೆ  ದಿಡ್ಡಳ್ಳಿಯಲ್ಲಿ ನಿರಾಶ್ರಿತವಾಗಿರುವ 577 ಗಿರಿಜನ ಕುಟುಂಬಗಳಿಗೆ ನಿವೇಶನ ದೊರಕಿಸಿ ಕೊಡುವುದಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಡಿ.18 ರಂದು ನಿರಾಶ್ರಿತರು ಧರಣಿ ನಡೆಸುತ್ತಿರುವ ಪ್ರದೇಶದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸಂಕಲ್ಪಸಭೆ ನಡೆಸಲು ಭೂಮಿ ಮತ್ತು ವಸತಿ ಹೋರಾಟ ಸಮಿತಿ ನಿರ್ಧರಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News