×
Ad

ರಾಜ್ಯ ಶೇ.50ರಷ್ಟು ಸಾಲಮನ್ನಾ ಮಾಡಲು ಸಿದ್ಧ: ಬಿಜೆಪಿ ಮುಖಂಡರಿಗೆ ಸಿದ್ದರಾಮಯ್ಯ ಸವಾಲು

Update: 2016-12-17 21:56 IST

ಬೆಳಗಾವಿ, ಡಿ. 17: ರಾಜ್ಯದ ಬರ ಸ್ಥಿತಿಯ ಬಗ್ಗೆ ಚರ್ಚಿಸಲು ಕಾಲಾವಕಾಶ ಕೋರಿದರೆ ಪ್ರಧಾನಿ ಮೋದಿ ಸಮಯವನ್ನೇ ನೀಡುತ್ತಿಲ್ಲ. ಆದರೆ, ರಾಜ್ಯ ಬಿಜೆಪಿ ನಾಯಕರು ರೈತರ ಸಾಲಮನ್ನಾಕ್ಕೆ ಆಗ್ರಹಿಸುತ್ತಿದ್ದು, ಕೇಂದ್ರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.50ರಷ್ಟು ಸಾಲಮನ್ನಾ ಮಾಡಿದರೆ, ತಾನೂ ಶೇ.50ರಷ್ಟು ಸಾಲಮನ್ನಾ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

 ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ರಾಜ್ಯದ 139 ತಾಲೂಕುಗಳಲ್ಲಿ ಬರ ಆವರಿಸಿದ್ದು, ಪ್ರಧಾನಿ ಬಳಿ ಕಷ್ಟ ಹೇಳಿಕೊಳ್ಳಲು ಅವಕಾಶ ನೀಡದಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆ ಅಗೌರವ. ಈ ಕ್ರಮವನ್ನು ತಾನು ಖಂಡಿಸುತ್ತೇನೆ ಎಂದರು.

ಆರ್ಥಿಕ ವ್ಯವಸ್ಥೆ ಹಾಳು: ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮೋದಿ ತಾವು ದೇಶದ ಜನತೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ, ವಚನ ಭ್ರಷ್ಟರಾಗಿದ್ದಾರೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡುವ ಮೂಲಕ ಬಡವರು, ರೈತರಿಗೆ ಅನುಕೂಲ ಮಾಡಿಕೊಟ್ಟರು. ಆದರೆ, ಮೋದಿ ಆ ವರ್ಗದ ಜನರನ್ನು ಬ್ಯಾಂಕುಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಿಸುವ ಮೂಲಕ ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ ಎಂದರು.

ಭವಿಷ್ಯದ ಪ್ರಧಾನಿ ರಾಹುಲ್: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ದೇಶದಲ್ಲಿ ಅಧಿಕಾರದ ಗದ್ದುಗೆ ಏರಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರೆ ಭವಿಷ್ಯದ ಪ್ರಧಾನಿ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಘೋಷಿಸಿದರು.

ಮುಂಬರುವ 2018ರ ವಿಧಾನಸಭೆ ಚುನಾವಣೆ ರಣಕಹಳೆ ಬೆಳಗಾವಿಯಿಂದಲೇ ಮೊಳಗಲಿದ್ದು, ಕೇಂದ್ರದ ಜನ ವಿರೋಧಿ ನೀತಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸಲಿದೆ. ಅಲ್ಲದೆ, ಜಿಲ್ಲೆಯಿಂದ ಕನಿಷ್ಠ 13 ಸ್ಥಾನಗಳನ್ನು ಗೆಲ್ಲಿಸಿಕೊಡಲು ಮತದಾರರು ಸಹಕಾರ ನೀಡಬೇಕೆಂದು ಸಿದ್ದರಾಮಯ್ಯ ಕೋರಿದರು.

ಸಮಾರಂಭದಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ, ದೇಶಪಾಂಡೆ, ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಪ್ರಕಾಶ್ ಹುಕ್ಕೇರಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News